‘ನಾವು ಹೋರಾಡಬೇಕಾದದ್ದು ಬಿಜೆಪಿಯ ತಾವರೆ ಜೊತೆಗಲ್ಲ, ತಾವರೆಯ ಬೇರಿನಂತೆ ಕೊಳದೊಳಗೆ ಅವಿತಿರುವ ಆರ್‌ಎಸ್‌ಎಸ್ ಜೊತೆಗೆ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ಕಲಬುರಗಿ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ನಡೆದ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಆಯ್ದ ಸಂಪಾದಕೀಯಗಳ ಸಂಗ್ರಹವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ 23ನೇ ವಾರ್ಷಿಕ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ದಿ ವೈರ್ ಪ್ರಧಾನ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರು ಮಾತನಾಡಿ, ‘ನಮ್ಮ ದೇಶದಲ್ಲಿ ‘ವೋಟ್ ಚೋರಿ’ ಕುರಿತು ಚರ್ಚೆ ಆರಂಭಕ್ಕೂ ಮುನ್ನವೇ ‘ಖಬ್ರೋಂಕಿ ಚೋರಿ’ (ಸುದ್ದಿಗಳ ಕಳವು) ನಡೆದಿದೆ ಎಂದು ಹೇಳಿದರು.

‘ಮುಖ್ಯವಾಹಿನಿ ಮಾಧ್ಯಮಗಳು ಅನೇಕ ಸಂದರ್ಭಗಳಲ್ಲಿ ಸತ್ಯವನ್ನು ಮರೆಮಾಚುತ್ತಿವೆ. ಭಗತ್ ಸಿಂಗ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮುದ್ರಿತ ಮಾಧ್ಯಮಗಳ ಮಹತ್ವ ಸ್ಪಷ್ಟವಾಗಿತ್ತು. ಧರ್ಮ, ಜಾತಿ, ಭಾಷೆ ಹಾಗೂ ಪಂಥದ ಆಧಾರದ ಮೇಲೆ ದ್ವೇಷ ಹುಟ್ಟಿಸುವ ವರದಿಗಳಿಂದ ದೂರವಿದ್ದು, ನೈಜ ಹಾಗೂ ಜನಪರ ಸುದ್ದಿಗಳನ್ನು ಬಿತ್ತರಿಸಬೇಕು’ ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಎಳ್ಳ ಅಮವಾಸ್ಯೆ ಪ್ರಯುಕ್ತ ವಿಶೇಷ ಸಡಗರ ಸಮಾರಂಭ
ಕಾರ್ಯಕ್ರಮದಲ್ಲಿ ವಾರ್ತಾಭಾರತಿ ಸ್ಥಾಪಕ ನಿರ್ದೇಶಕ ಯಾಸಿನ್ ಮಾಲ್ಪೆ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಶಾಸಕ ಬಿ.ಆರ್.ಪಾಟೀಲ್, ರಹೀಮ್ ಖಾನ್, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಕೋರಣೆಶ್ವರ ಸ್ವಾಮಿ, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಪೂಜ್ಯ ಭಂತೆ ವರಜ್ಯೋತಿ, ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ, ಚಾಮರಾಜ ಮಾಲಿಪಾಟೀಲ್, ದಸಂಸ ಮುಖಂಡ ಡಾ. ಡಿ.ಜಿ. ಸಾಗರ್, ಅಬಣ್ಣ ಆರೋಲಿಕರ್, ರಾಬರ್ಟ್ ಮಿರಾಂದ, ಎನ್.ಎಸ್. ಬೋಸರಾಜು ಸೇರಿದಂತೆ ಹಲವರು ಮಾತನಾಡಿದರು.
ವೇದಿಕೆಯ ಮೇಲೆ ಸಚಿವ ಶರಣಬಸಪ್ಪ ದರ್ಶನಾಪುರ, ದಸಂಸ ಮುಖಂಡ ಮರೆಪ್ಪ ಚಟ್ಟೇಕರ್, ಮಾಜಿ ಕಾರ್ಮಿಕ ಸಚಿವ ಎಸ್.ಕೆ. ಕಾಂತ, ಹಝರತ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.





