ಪ್ರಿಯಕರನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿರುವ ಘಟನೆ ಜೇವರ್ಗಿ ತಾಲ್ಲೂಕಿನ ಭಾಗೋಡಿ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ನಡೆದಿದೆ.
ತಿಪ್ಪಣ್ಣ ಅಲಿಯಾಸ್ ಕುಪೇಂದ್ರ ಮಹಾದೇವ ನೀಲಕಂಠಿ (30) ಕೊಲೆಯಾದ ವ್ಯಕ್ತಿ. ಕುಪೇಂದ್ರ ಪತ್ನಿ ಶಾಂತಮ್ಮ ತನ್ನ ಪ್ರಿಯಕರನ್ನು ಮನೆಗೆ ಕರೆಸಿಕೊಂಡು ಮಂಚದ ಮೇಲೆ ಮಲಗಿದ್ದ ಕುಪೇಂದ್ರ ಅವರನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಪ್ರಿಯಕರ ಪರಾರಿಯಾಗಿದ್ದು, ಶಾಂತಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪತ್ನಿಯ ವಿವಾಹೇತರ ಸಂಬಂಧದಿಂದ ಕುಟುಂಬದಲ್ಲಿ ಬಿರುಕು ಮೂಡಿದಾಗ ತಿಪ್ಪಣ್ಣ ಮತ್ತು ಶಾಂತಮ್ಮಳಿಗೆ ಬುದ್ಧಿವಾದ ಹೇಳಲು ಗ್ರಾಮದ ಮುಖಂಡರು ಪಂಚಾಯಿತಿ ಮಾಡಿದ್ದರು. ಆದರೂ ಶಾಂತಮ್ಮ ತನ್ನ ಹಳೆ ಚಾಳಿ ಮುಂದುವರಿಸಿದ್ದಳು. ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎನ್ನುವ ಚರ್ಚೆ ಗ್ರಾಮದಲ್ಲಿ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣವರ್, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಿಪ್ಪಣ್ಣ ರಾತ್ರಿ ಊಟ ಮಾಡಿ ಗ್ರಾಮದ ನಾಟಕ ಕಟ್ಟೆಗೆ ಬಂದು ಮಲಗಿದ್ದಾರೆ. ರಾತ್ರಿ ಮನೆಗೆ ಬರುವಂತೆ ಪತ್ನಿ ಕರೆದಾಗ ಹೋಗಿದ್ದಾರೆ. ಆಗ ಶಾಂತಮ್ಮ ಮತ್ತು ಪ್ರಿಯಕರ ಕೂಡಿಕೊಂಡು ಕೊಲೆ ಮಾಡಿದ್ದಾರೆ ಎನ್ನುವ ಮಾತುಗಳು ಗ್ರಾಮದಲ್ಲಿ ಕೇಳಿ ಬಂದಿವೆ. ಉಸಿರುಗಟ್ಟಿಸಿ ಕೊಲೆ ಮಾಡುವಾಗ ತಿಪ್ಪಣ್ಣ ಜೋರಾಗಿ ಚೀರಾಡಿದ್ದಾರೆ. ಚೀರಾಟದ ಧ್ವನಿ ಕೇಳಿ ಪಕ್ಕದ ಮನೆಯವರು ಕಿಟಕಿ ಮೂಲಕ ನೋಡಿದಾಗ ಕೊಲೆ ಘಟನೆ ಕಂಡು ಬಂದಿದೆ. ಗ್ರಾಮದ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕಲಬುರಗಿ | ಚಾವಣಿ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವು





