ಸಿಮೆಂಟ್ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ, ಕಬ್ಬಿಣದ ರಾಡ್‌ವೊಂದು ಕಳಚಿ ಬಿಸಿದ್ದು, ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಜಾರ್ಖಂಡ ಮೂಲದ ರಾಜಕುಮಾರ (26) ಎಂದು ಗುರುತಿಸಲಾಗಿದೆ.
ಸೇಡಂನಲ್ಲಿರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಂಭವಿಸಿರುವ ನಾಲ್ಕನೇ ಸಾವು ಇದಾಗಿದೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಕಾರಣ, ಕಾರ್ಮಿಕರ ಸಾವುಗಳು ಸಂಭವಿಸುತ್ತಿವೆ ಎಂದು ಆರೋಪಿಸಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಸಾವನ್ನಪ್ಪಿದ ನಾಲ್ವರು ಕಾರ್ಮಿಕರ ಪೈಕಿ, ಇಬ್ಬರು ಸೇಡಂ ತಾಲೂಕಿನವರೇ ಆಗಿದ್ದಾರೆ. ಓರ್ವ ಜಾರ್ಖಂಡ್ ಮೂಲದವರಾಗಿದ್ದು, ಮತ್ತೋರ್ವನ ಮೂಲ ತಿಳಿದುಬಂದಿದೆ. ಕೆಲ ದಿನಗಳ ಹಿಂದೆಯಷ್ಟೇ ಸೇಡಂ ತಾಲೂಕಿನ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ ಎಂಬವರು ಸಾವನ್ನಪ್ಪಿದ್ದರು. ಇದೀಗ, ರಾಜಕುಮಾರ್ ಸಾವಿಗೀಡಾಗಿದ್ದಾರೆ.
ಕಾರ್ಮಿಕ ರಾಜಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕರನ್ನು ಬಲಿ ಪಡೆಯುತ್ತಿರುವ ಶ್ರೀ ಸಿಮೆಂಟ್ ಕಾರ್ಖಾನೆಯನ್ನು ಮುಚ್ಚಬೇಕೆಂದು ಸ್ಥಳೀಯರು ಹಾಗೂ ಹಲವಾರು ಗ್ರಾಮಗಳ ಜನರು ಆಗ್ರಹಿಸಿದ್ದಾರೆ. ಕಾರ್ಖಾನೆಯಿಂದಾಗುತ್ತಿರುವ ಅನಾಹುತಗಳ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಕಿಡಿಕಾರಿದ್ದಾರೆ.




