ಜೇವರ್ಗಿ ಪಟ್ಟಣದ ಐತಿಹಾಸಿಕ ಮಕ್ಕಾ ಮಸೀದಿಯಲ್ಲಿ ಜಮಾತ್ ಇಸ್ಲಾಮಿ ಹಿಂದ್ ವತಿಯಿಂದ ರಂಜಾನ್ ಹಬ್ಬದ ಅಂಗವಾಗಿ ಇಫ್ತಾರ್ ಕೂಟವನ್ನು ಮಂಗಳವಾರ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ನಾಯಕರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ರಂಜಾನ್ ಮಾಸದ ಮಹತ್ವವನ್ನು ವಿವರಿಸಿದರು.
ಇದೆ ವೇಳೆ ಗಣ್ಯರು ಮಾತನಾಡಿ, ‘ರಂಜಾನ್ ಮಾಸವು ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ಕಾಲವಾಗಿದ್ದು, ಇದು ಆತ್ಮಶುದ್ಧೀಕರಣ, ನಿಯಮಾನುಸರಣೆ ಮತ್ತು ಅಲ್ಲಾಹನಿಗೆ ಹತ್ತಿರವಾಗುವ ಸಮಯವಾಗಿದೆ ಎಂದು ಹೇಳಿದರು. ಈ ಅವಧಿಯಲ್ಲಿ ಉಪವಾಸದ ಮೂಲಕ ಶಾರೀರಿಕ ಮತ್ತು ಮಾನಸಿಕ ನಿಯಂತ್ರಣ ಸಾಧಿಸುವುದರ ಜೊತೆಗೆ, ಬಡವರ ನೋವು-ನಲಿವುಗಳನ್ನು ಅರಿಯುವ ಮಾನವೀಯತೆ ಬೆಳೆಸಿಕೊಳ್ಳಲು ಅವಕಾಶ ಸಿಗುತ್ತದೆ’ ಎಂದು ತಿಳಿಸಿದರು.
‘ರಂಜಾನ್ ತಿಂಗಳಲ್ಲಿ ಪ್ರತಿದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ‘ರೋಜಾ’ ಉಪವಾಸವನ್ನು ಆಚರಿಸುವುದು ಕಡ್ಡಾಯವಾಗಿದ್ದು, ಇದು ಕೇವಲ ಆಹಾರ ತ್ಯಾಗವಲ್ಲದೆ, ಕೆಟ್ಟ ಆಲೋಚನೆಗಳು, ಅಸಹನೀಯತೆ ಹಾಗೂ ಅನೈತಿಕ ವರ್ತನೆಗಳಿಂದ ದೂರವಿರುವ ಶಿಸ್ತಿನ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ’ ಎಂದು ವಿವರಿಸಲಾಯಿತು.

‘ಈ ಪವಿತ್ರ ಅವಧಿಯಲ್ಲಿ ಕುರಾನ್ ಪಠಣಕ್ಕೆ ವಿಶೇಷ ಮಹತ್ವವಿದ್ದು, ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸತ್ಯನಿಷ್ಠೆಯಿಂದ ನಡೆಸಿಕೊಳ್ಳುವಂತೆ ಪ್ರೇರಣೆ ಪಡೆಯುತ್ತಾರೆ. ಜೊತೆಗೆ, ಬಡವರಿಗಾಗಿ ಝಕಾತ್ ಮತ್ತು ಫಿತ್ರ ರೂಪದಲ್ಲಿ ದಾನ ಮಾಡುವುದನ್ನು ಧಾರ್ಮಿಕ ಕರ್ತವ್ಯವಾಗಿ ಪರಿಗಣಿಸಲಾಗುತ್ತದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು ‘ಧರ್ಮ, ಜಾತಿ ಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಇಫ್ತಾರ್ ಕೂಟವು ಕೇವಲ ಉಪವಾಸ ಮುರಿಯುವ ಕಾರ್ಯಕ್ರಮವಲ್ಲ, ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಯಾಗಿದೆ’ ಎಂದು ಹೇಳಿದರು.
ರಂಜಾನ್ ಅಂತ್ಯದಲ್ಲಿ ಚಂದ್ರದರ್ಶನವಾದ ನಂತರ ಷವ್ವಾಲ್ ತಿಂಗಳ ಮೊದಲ ದಿನ ಈದ್-ಉಲ್-ಫಿತರ್ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗುತ್ತದೆ. ಆ ದಿನ ವಿಶೇಷ ನಮಾಜ್ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂತೋಷವನ್ನು ಹಂಚಿಕೊಳ್ಳುವುದು ಸಂಪ್ರದಾಯವಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಬಲಗೈ ಸಮುದಾಯಕ್ಕೆ ಅನ್ಯಾಯ ಆರೋಪ: ಮಾ. 25ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟಕ್ಕೆ ಕರೆ
ಇಫ್ತಾರ್ ಕೂಟದಲ್ಲಿ ಅನೇಕ ಮುಸ್ಲಿಂ ಬಾಂಧವರು, ಯುವಕರು ಹಾಗೂ ವಿವಿಧ ಸಮುದಾಯದ ಜನರು ಭಾಗವಹಿಸಿ, ಉಪವಾಸ ಮುರಿದು ಸಾಮರಸ್ಯದ ಸಂದೇಶವನ್ನು ಸಾರಿದರು. ಕಾರ್ಯಕ್ರಮವು ಸೌಹಾರ್ದ ಮತ್ತು ಏಕತೆ ಸಾರುವ ಮೂಲಕ ಯಶಸ್ವಿಯಾಗಿ ನೆರವೇರಿತು.





