ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಸಮಗ್ರ ಅಭಿವೃದ್ಧಿಗೆ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ ₹25 ಕೋಟಿ ಅನುದಾನ ಮಂಜೂರು ಮಾಡುವಂತೆ ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ನಿರ್ಮಾಣ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಿದರು.
ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಕ್ರಮ್ ತೇಜಸ್ ನೇತೃತ್ವದ ಮಂಗಳವಾರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ವಿಕ್ರಮ್ ತೇಜಸ್ ಮಾತನಾಡಿ, ‘ರಾಜ್ಯ ಸರ್ಕಾರವು ಈಗಾಗಲೇ ಸ್ಮಾರಕ ನಿರ್ಮಾಣಕ್ಕಾಗಿ 10 ಎಕರೆ ಭೂಮಿಯನ್ನು ಮಂಜೂರು ಮಾಡಿ ₹3 ಕೋಟಿ ಅನುದಾನ ನೀಡಿರುವುದನ್ನು ಉಲ್ಲೇಖಿಸಿ, ಯೋಜನೆಯ ವಿಸ್ತಾರವನ್ನು ಗಮನಿಸಿದರೆ ಈ ಅನುದಾನ ಅಪರ್ಯಾಪ್ತವಾಗಿದೆ’ ಎಂದು ತಿಳಿಸಲಾಗಿದೆ.
‘ಸ್ಮಾರಕದ ಅಂಗವಾಗಿ ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರ, ಅಂತರಾಷ್ಟ್ರೀಯ ಮಟ್ಟದ ಗ್ರಂಥಾಲಯ, ಉದ್ಯಾನವನ, ಬೌದ್ಧಧಮ್ಮ ಅಧ್ಯಯನ ಕೇಂದ್ರ, ಸಭಾಂಗಣ, ಅತಿಥಿಗೃಹ ಹಾಗೂ ಬಾಬಾ ಸಾಹೇಬರು ಸ್ಥಳೀಯರೊಂದಿಗೆ ತೆಗೆಸಿಕೊಂಡ ಭಾವಚಿತ್ರದ ಬೃಹತ್ ಪ್ರತಿಮೆ ನಿರ್ಮಾಣದ ಯೋಜನೆ ಹೊಂದಲಾಗಿದೆ. ಜೊತೆಗೆ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿ-ಯುವಕರಿಗಾಗಿ ಕೌಶಲ್ಯ ತರಬೇತಿ ಕೇಂದ್ರ ಹಾಗೂ ಐಎಎಸ್, ಐಪಿಎಸ್, ಕೆಎಎಸ್, ಐಎಫ್‌ಎಸ್, ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ’ ಎಂದು ವಿವರಿಸಿದರು.
‘ಅಂಬೇಡ್ಕರ್ ಅವರು ವಾಡಿ ಭೇಟಿಯ ಕುರಿತು ಸಂಶೋಧನಾ ಗ್ರಂಥ ರಚನೆಗಾಗಿ ₹10 ಲಕ್ಷ ವಿಶೇಷ ಅನುದಾನ ಮಂಜೂರು ಮಾಡಬೇಕು ಎಂದು ಸಮಿತಿ ಮನವಿ ಮಾಡಿದೆ. ಸ್ಮಾರಕ ನಿರ್ಮಾಣಕ್ಕೆ ಮಂಜೂರಾದ ಭೂಮಿಯನ್ನು ಸ್ಮಾರಕದ ಹೆಸರಿಗೆ ನೊಂದಣಿ ಮಾಡಿ, ಬೇರೆ ಯಾವುದೇ ಯೋಜನೆಗೆ ಬಳಸಬಾರದು ಎಂಬಂತೆ ಸರ್ಕಾರದಿಂದ ಸ್ಪಷ್ಟ ಆದೇಶ ಹೊರಡಿಸಬೇಕು. ಸಮಗ್ರ ನೀಲನಕ್ಷೆ ಸಿದ್ಧಪಡಿಸಿ ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಜೊತೆಗೆ ಕಟ್ಟಡಗಳನ್ನು ಬೌದ್ಧ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಬೇಕು’ ಎಂದು ಆಗ್ರಹಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಬೆಂಕಿ ಅವಘಡ; ₹50 ಲಕ್ಷಕ್ಕೂ ಅಧಿಕ ನಷ್ಟ
ಈ ಸಂದರ್ಭದಲ್ಲಿ ಪಿಎಂಕೆ ಫ್ಯಾನ್ಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ರವಿ ಕೋಳಕೂರ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಖಜಾಂಚಿ ಸಿದ್ದರಾಮ ನಡಗೇರಿ, ಸಾಮಾಜಿಕ ಕಾರ್ಯಕರ್ತೆ ರಮಾ ದೊಡ್ಡಮನಿ ಹಾಗೂ ಭೀಮರತ್ನ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಮೈಲಾರಿ ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು.





