ಕಲಬುರಗಿ ಜಿಲ್ಲೆಯ ಯಡ್ರಾಮಿ, ಜೇವರ್ಗಿ ತಾಲೂಕಿನಲ್ಲಿ ₹867.49 ಕೋಟಿ ವೆಚ್ಚದ 87 ಕಾಮಗಾರಿಗಳ ಶಂಕುಸ್ಥಾಪನೆ, ₹38.29 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಸೇರಿ ಒಟ್ಟು ₹906 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದರು.
ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ʼವಿರೋಧಪಕ್ಷದವರು ರಾಜಕಾರಣಕ್ಕಾಗಿ ಸುಳ್ಳನ್ನೇ ಅವಲಂಬಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತಕ್ಷೇತ್ರದಲ್ಲಿ ₹906 ಕೋಟಿ ವೆಚ್ಚ ಮಾಡಲಾಗುತ್ತಿರಲಿಲ್ಲʼ ಎಂದರು.
ʼಗ್ಯಾರಂಟಿ ಯೋಜನೆಗಳಿಗಾಗಿ 1 ಲಕ್ಷದ 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ವೆಚ್ಚ ಮಾಡಲಾಗಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಾವು ಸರ್ಕಾರ ನುಡಿದಂತೆ ನಡೆಯುವವರು. ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಅಭಿವೃದ್ಧಿ ಯೋಜನೆಗಳನ್ನು ಕೂಡ ಆದ್ಯತೆ ಮೇರೆಗೆ ಅನುಷ್ಠಾನ ಮಾಡಲಾಗುತ್ತಿದೆ. ಇದು ನಮ್ಮ ರಾಜಕೀಯ ಬದ್ಧತೆʼ ಎಂದರು.

ʼಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ 592 ಭರವಸೆಗಳನ್ನು ನೀಡಲಾಗಿತ್ತು. 243 ಭರವಸೆಗಳನ್ನು ಈಡೇರಿಸಲಾಗಿದೆ. ಉಳಿದ ಅವಧಿಯಲ್ಲಿ ಮಿಕ್ಕ ಭರವಸೆಗಳನ್ನು ಈಡೇರಿಸಲಾಗುವುದು. ಬಿಜೆಪಿ 2018 ರಿಂದ ಅಧಿಕಾರದಲ್ಲಿದ್ದು, ಅವರು ನೀಡಿದ್ದ 600 ಭರವಸೆಗಳಲ್ಲಿ 10% ಭರವಸೆಗಳನ್ನು ಕೂಡ ಈಡೇರಿಸಿರಲಿಲ್ಲʼ ಎಂದರು.
ʼರಾಜ್ಯದಲ್ಲಿ 63 ಹೊಸ ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಬಿಜೆಪಿಯವರು 2018 ರಿಂದ 2023 ರವರೆಗೆ ನೂತನ ತಾಲ್ಲೂಕುಗಳಲ್ಲಿ ಕೇವಲ 14 ಕಡೆ ಮಾತ್ರ ತಾಲ್ಲೂಕು ಆಡಳಿತ ಕಚೇರಿ ನಿರ್ಮಾಣ ಮಾಡಿದ್ದರು. 2023ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ 49 ತಾಲ್ಲೂಕುಗಳಲ್ಲಿ ಕೂಡ ಪ್ರಜಾಸೌಧಗಳನ್ನು ಮಂಜೂರು ಮಾಡಿದ್ದು, ನಿರ್ಮಾಣ ಮಾಡಲಾಗುತ್ತಿದೆ. ನಮ್ಮ ಸರ್ಕಾರದಲ್ಲಿ 17 ತಾಲ್ಲೂಕುಗಳು ಮಂಜೂರಾಗಿದ್ದು, 97 ನಾಡ ಕಚೇರಿಗಳು ಮಂಜೂರಾಗಿವೆ. ಕಲ್ಯಾಣ ಕರ್ನಾಟಕದಲ್ಲಿ 39 ಕಚೇರಿಗಳನ್ನು ಮಂಜೂರು ಮಾಡಲಾಗಿದೆ. ಎರಡನೇ ಹಂತದಲ್ಲಿ 53 ನಿರ್ಮಾಣವಾಗಿವೆ. ಕಲ್ಯಾಣ ಕರ್ನಾಟಕದ 25 ತಾಲ್ಲೂಕುಗಳಲ್ಲಿ ನಾಡ ಕಚೇರಿಗಳನ್ನು ನಮ್ಮ ಸರ್ಕಾರ ಮಂಜೂರು ಮಾಡಿದೆʼ ಎಂದರು.
ಈ ಬಾರಿ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿರುವುದರಿಂದ ವೈಮಾನಿಕ ಸಮೀಕ್ಷೆ ಕೈಗೊಂಡು ಪರಿಶೀಲಿಸಿ ಪರಿಹಾರ ಕೊಡಲು ನಿರ್ಧರಿಸಿ ಎಸ್ ಡಿ.ಆರ್.ಎಫ್ ನಿಂದ 1,218 ಕೋಟಿ ಜೊತೆಗೆ ಸರ್ಕಾರದ ವತಿಯಿಂದ ಒಟ್ಟು 1,031ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯದಲ್ಲಿ ಒಟ್ಟು 14.21 ಲಕ್ಷ ರೈತರ ಬೆಳೆ ಹಾನಿಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 7,21,786 ರೈತರ ಬೆಳೆ ಹಾನಿಗೊಳಗಾಗಿದೆ. 1,072 ಕೋಟಿ ಬೆಳೆ ಹಾನಿಗೆ ಪರಿಹಾರ ನೀಡಿದೆ.
ಕಲಬುರ್ಗಿ ಜಿಲ್ಲೆಯಲ್ಲಿ 3,23,318 ರೈತರ ಬೆಳೆ ಹಾನಿಯಾಗಿದ್ದು, ₹498 ಕೋಟಿ ಪರಿಹಾರ ನೀಡಲಾಗಿದೆ. ರೈತರ ಖಾತೆಗಳಿಗೆ ಈ ಹಣವನ್ನು ತಲುಪಿಸುವ ಕೆಲಸ ಮಾಡಿದ್ದೇವೆ. ರೈತರ ಸಹಾಯಕ್ಕೆ ಸರ್ಕಾರ ಸದಾ ಮುಂದಾಗಿದೆ.
ನೆಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ 233 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ಕಬ್ಬಿನ ಬೆಲೆ ಕಡಿಮೆ ಎಂದು ರೈತರು ಪ್ರತಿಭಟಿಸಿದಾಗ ಅವರ ನೆರವಿಗೆ ಸರ್ಕಾರ ಧಾವಿಸಿ ಸರ್ಕಾರದಿಂದ ₹50 ಹಾಗೂ ಕಾರ್ಖಾನೆಯಿಂದ 50 ರೂ. ನಿಗದಿ ಮಾಡಿ 300 ಕೋಟಿಗಳನ್ನು ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೀಡಲಾಗಿದೆ.

ʼಬಿಜೆಪಿಯ ಗೃಹ ಸಚಿವ ಹಾಗೂ ಉಪಪ್ರಧಾನಿಯಾಗಿದ್ದ ಅಡ್ವಾಣಿ ಅವರು 371ಜೆ ಜಾರಿ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದನ್ನು ಜಾರಿ ಮಾಡಿದರು. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಂ ಸಿಂಗ್ ಅವರ ಹೋರಾಟದಿಂದ ಇದು ಸಾಧ್ಯವಾಯಿತು. ಇದರಿಂದಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾಯಿತು. ₹13,000 ಕೋಟಿ ಗಳನ್ನು ಮೂರು ವರ್ಷಗಳಲ್ಲಿ ಒದಗಿಸಲಾಗಿದ್ದು, ಈ ವರ್ಷದಲ್ಲಿ 3,000 ಕೋಟಿ ಒದಗಿಸಲಾಗಿದೆ. ಕೆಕೆಆರ್‌ಡಿಬಿ ಅನುದಾನವನ್ನು ಪೂರ್ಣವಾಗಿ ವೆಚ್ಚ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಅಜಯ್ ಸಿಂಗ್ ಅವರಿಗೆ ತಿಳಿಸಲಾಗಿತ್ತು. ಅದರಂತೆ 300 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು ಹಾಕಲಾಗಿದೆ. ರಾಜ್ಯದಲ್ಲಿ ಒಟ್ಟು 900 ರಾಜ್ಯಕ್ಕೆ ಕೆಪಿಎಸ್ ಮಂಜೂರಾಗಿದೆʼ ಎಂದು ಹೇಳಿದರು.
ʼಈ ಭಾಗದ ಅಸಮಾನತೆ ಹೋಗಲಾಡಿಸಲು ನಂಜುಂಡಪ್ಪ ಅವರ ವರದಿಯನ್ನು ಆಧರಿಸಿ ಶಿಫಾರಸ್ಸುಗಳನ್ನು ಜಾರಿಗೆ ತರಲಾಗಿದೆ. ಇದರ ಪರಿಣಾಮಗಳ ಬಗ್ಗೆ ವರದಿ ಸಲ್ಲಿಸಲು ಗೋವಿಂದರಾವ್ ಸಮಿತಿ ರಚಿಸಲಾಗಿದೆ. ಶೀಘ್ರದಲ್ಲಿ ವರದಿಯ ಶಿಫಾರಸುಗಳನ್ನು ಜಾರಿ ಮಾಡಲಾಗುವುದುʼ ಎಂದು ಭರವಸೆ ನೀಡಿದರು.
ಇದನ್ನೂ ಓದಿ : ಬೀದರ್ | ನಿವೃತ ಶಿಕ್ಷಕ ಪ್ರಕಾಶ ಗೋದಮಗಾವೆಗೆ ಅದ್ದೂರಿ ಬೀಳ್ಕೊಡುಗೆ
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಮಧು ಬಂಗಾರಪ್ಪ, ಶರಣಬಸಪ್ಪ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷರು, ಶಾಸಕರೂ ಆದ ಅಜಯ್ ಸಿಂಗ್, ಶಾಸಕರಾದ ಅಲ್ಲಮ ಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಚಂದ್ರಕಾಂತ ಪಾಟೀಲ್ ಸೇರಿ ಹಲವು ಗಣ್ಯರು, ಮುಖಂಡರು, ಉಪಸ್ಥಿತರಿದ್ದರು.





