ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕ್ರೂಸರ್ (ತೂಫಾನ್) ವಾಹನ ಮತ್ತು ರಾಜ್ಯ ಸಾರಿಗೆ ಬಸ್ ನಡುವೆ ಶನಿವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಾಲಕ ಸೇರಿ ಕಲಬುರಗಿ ಜಿಲ್ಲೆಯ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಗ್ರಾಮದ ಚೇತನ್ ಮಾದರ (18), ರೋಹಿದಾಸ್ ಮಾದರ (19), ಮಲ್ಲಮ್ಮ (45) ಹಾಗೂ ಕ್ರೂಸರ್ ಚಾಲಕ ಮಾನಪ್ಪ (30) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಕ್ರೂಸರ್ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ದೇವಲ ಗಾಣಗಾಪುರದ ಒಂದೇ ಕುಟುಂಬದ 12 ಮಂದಿ ಕ್ರೂಸರ್ ಮೂಲಕ ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.
ಕಾರ್ಕಳದಿಂದ ಉಡುಪಿಯತ್ತ ಸಂಚರಿಸುತ್ತಿದ್ದ ವೇಳೆ ಕಾರ್ಕಳ ಸಮೀಪ ಎದುರಿನಿಂದ ಬಂದ ಬಸ್ ಮತ್ತು ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ.
ದುರ್ಘಟನೆಯಲ್ಲಿ ಗಾಯಗೊಂಡ ಇನ್ನೂ 9 ಮಂದಿಯನ್ನು ಉಡುಪಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸಂಗೀತ ಎಂಬವರಿಗೆ ಒಂದು ಕೈ ಹಾಗೂ ಕಾಲು ಮುರಿದಿರುವುದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಶಾಂತಿ, ಸಮಾನತೆಯ ಸಂದೇಶದೊಂದಿಗೆ ಪ್ರಬುದ್ಧ ಬುದ್ಧ ವಿಹಾರ ಉದ್ಘಾಟನೆ
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ದೇವಲ ಗಾಣಗಾಪುರ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಈ ಸಂಬಂಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.





