ಹೊಲಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ತೆರಳಿದ್ದ ಯುವಕನೊಬ್ಬ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಂಚೋಳಿ ತಾಲ್ಲೂಕಿನ ದೋಟಿಕೊಳ ಗ್ರಾಮದಲ್ಲಿ ರವಿವಾರ ಬೆಳಕಿಗೆ ಬಂದಿದೆ.
ಮೃತನನ್ನು ದೋಟಿಕೊಳ ಗ್ರಾಮದ ಶರಣು ಗುಂಡಪ್ಪ ಭೋಸಗಿ (25) ಎಂದು ಗುರುತಿಸಲಾಗಿದೆ. ಕಡಲೆ ಹೊಲ ಕಾಯಲು ತೆರಳಿದ್ದ ಶರಣು ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಡೆಸಿದ ಹುಡುಕಾಟದ ವೇಳೆ ಗ್ರಾಮದ ಸಣ್ಣ ನೀರಾವರಿ ಕೆರೆಯಲ್ಲಿ ಶರಣು ಅವರ ಮೃತದೇಹ ಪತ್ತೆಯಾಗಿದೆ. ಮೃತನ ಕಾಲಿಗೆ ಹಗ್ಗ ಬಿಗಿದಿರುವ ಸ್ಥಿತಿ ಕಂಡುಬಂದಿರುವುದರಿಂದ ಪ್ರಕರಣ ಸಂಶಯಾಸ್ಪದವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ಎಸ್‌ಪಿ ಗಂಗಮ್ಮ ಜಿನಿಕೇರಿ ಹಾಗೂ ಸಿಪಿಐ ಕಪಿಲದೇವ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಎಸ್‌ಐಆರ್ ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆ ಅಲ್ಲ; ಪ್ರಜಾಸತ್ತಾತ್ಮಕ ಹಕ್ಕುಗಳ ಹತ್ಯೆ: ಶಿವಸುಂದರ್
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಇದು ಆತ್ಮಹತ್ಯೆಯೋ, ಅಪಘಾತವೋ ಅಥವಾ ಬೇರೆ ಕಾರಣವೋ ಎಂಬುದು ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವೇ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.





