ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ರೋಸ್ಟರ್ ನಿಯಮಗಳನ್ನು ಉಲ್ಲಂಘಿಸಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಿಟಿಂಗ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಆಗ್ರಹಿಸಿದೆ.
ನಗರದಲ್ಲಿ ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡ ಲಕ್ಷಣ ಮಂಡಲಗೇರಾ ಮಾತನಾಡಿ, ‘ವಿಶ್ವವಿದ್ಯಾಲಯದ ಉಪಕುಲಪತಿ ಬಟ್ಟು ಸತ್ಯನಾರಾಯಣ ಅವರ ಅವಧಿಯಲ್ಲಿ ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿದೆ’ ಎಂದು ಆರೋಪಿಸಿದರು.
‘ಭಾರತ ಸರ್ಕಾರದ ಮೀಸಲಾತಿ ರೋಸ್ಟರ್ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ನಡೆಸಿರುವುದಲ್ಲದೆ, ಯುಜಿಸಿ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳನ್ನು ಪಾಲಿಸದೆ ಕೆಲವರನ್ನು ಹಿರಿಯ ಹುದ್ದೆಗಳಿಗೆ ನೇಮಕ ಮಾಡಲಾಗಿದೆ’ ಎಂದು ಅವರು ಹೇಳಿದರು.
‘ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆ ಸರಿಯಾಗಿ ಜಾರಿಗೆ ಬರಲೆಂದು ಭಾರತ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (Department of Personnel and Training) 1997ರ ಜುಲೈ 2ರಂದು ಪೋಸ್ಟ್-ಆಧಾರಿತ ಮೀಸಲಾತಿ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ನಿಯಮಗಳ ಪ್ರಕಾರ ಪ್ರತಿಯೊಂದು ಹುದ್ದೆಗೆ ನಿಗದಿತ ರೋಸ್ಟರ್ ಪಾಯಿಂಟ್ ಇರುತ್ತದೆ ಹಾಗೂ ಅದನ್ನು ಯಾವುದೇ ಸಂದರ್ಭದಲ್ಲೂ ಬದಲಾಯಿಸಲು ಅವಕಾಶವಿಲ್ಲ. ಆದರೆ ವಿಶ್ವವಿದ್ಯಾಲಯದಲ್ಲಿ ಪ್ರಕಟಿಸಲಾದ ರೋಸ್ಟರ್ ಪಟ್ಟಿಗಳಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ’ ಎಂದರು.
‘2019ರಲ್ಲಿ ಪ್ರಕಟಿಸಿದ ರೋಸ್ಟರ್ ಪಟ್ಟಿಯಲ್ಲಿ ಭರ್ತಿಯಾದ ಹುದ್ದೆಗಳ ಜೊತೆಗೆ ಖಾಲಿ ಹುದ್ದೆಗಳ ವಿವರಗಳನ್ನೂ ನೀಡಲಾಗಿತ್ತು. ಆದರೆ 2025ರಲ್ಲಿ ಪ್ರಕಟಿಸಿದ ರೋಸ್ಟರ್ ಪಟ್ಟಿಯಲ್ಲಿ ಭರ್ತಿಯಾದ ಹುದ್ದೆಗಳನ್ನಷ್ಟೇ ತೋರಿಸಲಾಗಿದ್ದು, ಖಾಲಿ ಹುದ್ದೆಗಳ ವಿವರಗಳನ್ನು ನೀಡಲಾಗಿಲ್ಲ. ಇದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ’ ಎಂದು ಅವರು ಹೇಳಿದರು.
‘ಈ ಸಂಬಂಧ ವಿಶ್ವವಿದ್ಯಾಲಯದ ಎಸ್‌ಸಿ, ಎಸ್‌ಟಿ ನೌಕರರ ಸಂಘವು ಹೈಕೋರ್ಟ್‌ನಲ್ಲಿ ರಿಟ್ ಪಿಟೀಶನ್ ಸಂಖ್ಯೆ 200013/2023 (S-RES) ಸಲ್ಲಿಸಿದ್ದು, ರೋಸ್ಟರ್ ನಿಯಮ ಉಲ್ಲಂಘನೆ ಕುರಿತು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ತಿಳಿಸಿದರು. ಆದರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಭೆಯಲ್ಲಿ ನ್ಯಾಯಾಲಯವೇ ರೋಸ್ಟರ್‌ಗೆ ಅನುಮೋದನೆ ನೀಡಿದಂತೆ ತಪ್ಪು ಮಾಹಿತಿ ನೀಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇನ್ನೊಂದೆಡೆ, ಕೆಲವು ಅಭ್ಯರ್ಥಿಗಳು ಯುಜಿಸಿ ನಿಗದಿಪಡಿಸಿರುವ ಅರ್ಹತೆಗಳನ್ನು ಪೂರೈಸದೆ ಇದ್ದರೂ ಸಹಾಯಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ’ ಎಂಬ ಆರೋಪವೂ ಕೇಳಿ ಬಂದಿದೆ ಎಂಬರು.
‘ಯುಜಿಸಿ ನಿಯಮಗಳ ಪ್ರಕಾರ ಸಹ ಪ್ರಾಧ್ಯಾಪಕರಾಗಲು ಕನಿಷ್ಠ 8 ವರ್ಷಗಳ ಸಹಾಯಕ ಪ್ರಾಧ್ಯಾಪಕರ ಸೇವೆ ಇರಬೇಕು. ಜೊತೆಗೆ ನೆಟ್ (NET) ಅಥವಾ ಪಿಎಚ್‌ಡಿ (Ph.D) ಅರ್ಹತೆ ಕಡ್ಡಾಯವಾಗಿದ್ದು, NET ಅಥವಾ Ph.D ಪಡೆದ ನಂತರದ ಸೇವೆಯನ್ನಷ್ಟೇ ಪರಿಗಣಿಸಬೇಕು. ಆದರೆ ಈ ನಿಯಮಗಳನ್ನು ಪಾಲಿಸದೆ ಕೆಲ ನೇಮಕಾತಿಗಳು ನಡೆದಿರುವ ಉದಾಹರಣೆಗಳಿವೆ’ ಎಂದು ಹೇಳಿದರು.
‘ಸಂಘಟನೆ ನೀಡಿದ ಮಾಹಿತಿಯ ಪ್ರಕಾರ ಬಸವರಾಜ ಕುಬಕಡ್ಡಿ ಅವರನ್ನು 2022ರ ಡಿಸೆಂಬರ್ 8ರಂದು ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಕ ಮಾಡಲಾಗಿದೆ. ಅವರು ಪಿಎಚ್‌ಡಿ ಪದವಿ ಪಡೆದಿದ್ದು 2015ರ ಫೆಬ್ರವರಿ 25ರಂದು. ನಿಯಮ ಪ್ರಕಾರ ಅವರಿಗೆ ಅಗತ್ಯವಾದ 8 ವರ್ಷಗಳ ಸೇವೆ 2023ರ ಫೆಬ್ರವರಿಯಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅದಕ್ಕೂ ಮುನ್ನವೇ ಅವರನ್ನು ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.
‘ಇದೇ ರೀತಿ ಕೋಟಾ ಸಾಯಿ ಕೃಷ್ಣ ಅವರನ್ನು ಪರೀಕ್ಷಾ ನಿಯಂತ್ರಕರಾಗಿ ನೇಮಕ ಮಾಡಿದ ಬಳಿಕ ಭಾಷಾಶಾಸ್ತ್ರ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ನೇಮಕ ಮಾಡಲಾಗಿದೆ. ಅಗತ್ಯ ಅನುಭವ ಹಾಗೂ ಅರ್ಹತೆ ಕುರಿತು ಪ್ರಶ್ನೆಗಳು ಉದ್ಭವಿಸಿದ್ದವೆ ಎಂದು ಅವರು ಹೇಳಿದರು. ಇದರ ಜೊತೆಗೆ ಎಸ್. ಲಿಂಗಮೂರ್ತಿ, ಜಿ. ಮಹೇಂದ್ರ, ಸಂದೀಪ್, ಪ್ರಮೋದ್ ಕುಮಾರ್ ಸೇರಿದಂತೆ ಇನ್ನೂ ಹಲವರ ನೇಮಕಾತಿಗಳಲ್ಲಿಯೂ ನಿಯಮ ಉಲ್ಲಂಘನೆ ನಡೆದಿದೆ’ ಎಂದು ಆರೋಪಿಸಿದೆ.
ಕೆಲ ನೇಮಕಾತಿಗಳಲ್ಲಿ ಅರ್ಜಿ ಸಲ್ಲಿಕೆ, ಸಂದರ್ಶನ ಮತ್ತು ನೇಮಕಾತಿ ಆದೇಶ ಒಂದೇ ದಿನದಲ್ಲಿ ನಡೆದಿರುವುದಾಗಿ ದಾಖಲೆಗಳು ಸೂಚಿಸುತ್ತಿವೆ. ವಿಶ್ವವಿದ್ಯಾಲಯದ ನಿಯಮಾವಳಿ ಪ್ರಕಾರ ಸಂದರ್ಶನದ ಬಗ್ಗೆ ಅಭ್ಯರ್ಥಿಗಳಿಗೆ ಕನಿಷ್ಠ ಎರಡು ವಾರಗಳ ಮುಂಚಿತವಾಗಿ ಮಾಹಿತಿ ನೀಡಬೇಕು. ಆದರೆ ಈ ನಿಯಮ ಪಾಲಿಸಲಾಗಿಲ್ಲ’ ಎಂದು ದೂರಿದೆ.
‘ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಸಿಟಿಂಗ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಭಯ ಬೇಡ: ಸಿಇಒ ಲವೀಶ್ ಒರಡಿಯಾ
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ರಾಜೇಂದ್ರ ರಾಜವಾಳ ಹಾಗೂ ಮೈಲಾರಿ ದೊಡ್ಡಮನಿ ಉಪಸ್ಥಿತರಿದ್ದರು.





