ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ಅಪಘಾತಕ್ಕೀಡಾಗಿ ಬಾಲಕಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಆಳಂದ, ಕಲಬುರಗಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ನಡೆದಿದೆ.
ಮೃತ ಬಾಲಕಿ ರಾಧಿಕಾ (16) ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ಬಾಬುರಾವ, ಅನಿತಾ ದಂಪತಿಯ ಪುತ್ರಿ ಎಂದು ತಿಳಿದು ಬಂದಿದೆ.
ರಾಧಿಕಾ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಕೆಯನ್ನು ನಿಂಬರ್ಗಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕಳುಹಿಸಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ‘108’ ಆಂಬುಲೆನ್ಸ್ ಮೂಲಕ ಸ್ಟಾಫ್ ನರ್ಸ್ ಶಿವಮ್ಮ ಹಾಗೂ ರಾಧಿಕಾಳ ಪೋಷಕರು ಆಕೆಯನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆತರುತ್ತಿದ್ದರು. ಈ ವೇಳೆ ಆಳಂದ–ಕಲಬುರಗಿ ರಸ್ತೆಯ ರೈಲ್ವೆ ಮೇಲ್ಸೇತುವೆ ಬಳಿ ಆಂಬುಲೆನ್ಸ್ ಅಪಘಾತಕ್ಕೀಡಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಕ್ರೂಸರ್ ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು
ಅಪಘಾತದ ತೀವ್ರತೆಗೆ ಆಂಬುಲೆನ್ಸ್‌ನಲ್ಲಿ ಮಲಗಿದ್ದ ರಾಧಿಕಾ ಹೊರಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಆಂಬುಲೆನ್ಸ್ ಚಾಲಕ, ರಾಧಿಕಾಳ ತಂದೆ, ತಾಯಿ ಹಾಗೂ ಸ್ಟಾಫ್ ನರ್ಸ್ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ.





