ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ತಮ್ಮ ಆಡಳಿತವನ್ನು ಯಶಸ್ವಿ ಆಡಳಿತ ಎಂದು ಬಿಂಬಿಸಲಾಗುತ್ತಿರುವ ಈ ಸಂದರ್ಭದಲ್ಲಿ, ರಾಜ್ಯದ ಅಭಿವೃದ್ಧಿಯ ಮತ್ತೊಂದು ಕಟು ಸತ್ಯವನ್ನು ಸಮಾಜದ ಗಮನಕ್ಕೆ ತರುವುದು ಅಗತ್ಯವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಮುಬೀನ್ ಅಹಮದ್ ಕಲಬುರಗಿ ಹೇಳಿದ್ದಾರೆ.
‘ರಾಜ್ಯದಲ್ಲಿ 43,259 ಎಂಜಿನಿಯರ್‌ಗಳು ನಿರುದ್ಯೋಗಿಗಳಾಗಿದ್ದು, 3 ಲಕ್ಷ ನೇರ ಉದ್ಯೋಗಗಳು ಹಾಗೂ 3.79 ಲಕ್ಷ ಪರೋಕ್ಷ ಉದ್ಯೋಗಗಳು ನಷ್ಟಗೊಂಡಿವೆ. ಇದರ ಪರಿಣಾಮವಾಗಿ ಸುಮಾರು 2.98 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯ ಕಳೆದುಕೊಂಡಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಇದು ಕೇವಲ ಅಂಕಿ-ಅಂಶಗಳ ಸಮಸ್ಯೆಯಲ್ಲ, ರಾಜ್ಯದ ಲಕ್ಷಾಂತರ ಕುಟುಂಬಗಳ ಭವಿಷ್ಯ ಮತ್ತು ಘನತೆಯ ಪ್ರಶ್ನೆಯಾಗಿದೆ. ಕೈಗಾರಿಕಾ ಕುಸಿತ ಇದೇ ರೀತಿ ಮುಂದುವರೆದರೆ ನಿರುದ್ಯೋಗ, ಬಡತನ, ವಲಸೆ ಹಾಗೂ ಸಾಮಾಜಿಕ ಅಸ್ಥಿರತೆ ಹೆಚ್ಚುವ ಗಂಭೀರ ಅಪಾಯವಿದೆ’ ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಜಾತಿ ನಿಂದನೆ ಪ್ರಕರಣದ ಆರೋಪಿಯ ಬಂಧನಕ್ಕೆ ವಿಳಂಬ: ಮಹಿಪಾಲ್ ಆರೋಪ
‘ಸರ್ಕಾರವು ತಕ್ಷಣವೇ ಮುಚ್ಚಲ್ಪಟ್ಟ ಕೈಗಾರಿಕಾ ಘಟಕಗಳ ಸಮಗ್ರ ಪರಿಶೀಲನೆ ನಡೆಸಬೇಕು. ಅವುಗಳ ಪುನಶ್ಚೇತನಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ ತಾತ್ಕಾಲಿಕ ನೆರವು ಮತ್ತು ಪುನರ್ವಸತಿ ವ್ಯವಸ್ಥೆ ಒದಗಿಸಬೇಕು ಹಾಗೂ ಕೈಗಾರಿಕಾ ನೀತಿಯಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕು. ನಿಜವಾದ ಯಶಸ್ವಿ ಆಡಳಿತವೆಂದರೆ ಕೇವಲ ಅಧಿಕಾರದ ಅವಧಿಯಲ್ಲ, ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ಆಗಿದೆ ಎಂದು ಅವರು ಸ್ಪಷ್ಟಪಡಿಸಿದರು.





