ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಹೊರಗಿನಿಂದ ನಿಷೇಧಿತ ವಸ್ತುಗಳನ್ನು ಎಸೆಯಲು ಕೆಲ ದುಷ್ಕರ್ಮಿಗಳು ಯತ್ನಿಸಿದ ಎರಡು ಪ್ರತ್ಯೇಕ ಘಟನೆಗಳು ಸೋಮವಾರ ನಡೆದಿದ್ದು, ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಸಮಯೋಚಿತವಾಗಿ ತಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮೊದಲ ಪ್ರಕರಣದಲ್ಲಿ ಜ.12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೈಲಿನ ‘ಎ’ ಮತ್ತು ‘ಬಿ’ ಪಾಯಿಂಟ್ ನಡುವಿನ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಉಂಡೆ ಆಕಾರದ ಚೆಂಡಿನಂತಿದ್ದ ವಸ್ತುವನ್ನು ಜೈಲಿನೊಳಗೆ ಎಸೆಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ತಕ್ಷಣ ತಡೆದು, ಆತನೊಂದಿಗೆ ಸಹಕರಿಸಿದ್ದ ಇನ್ನಿಬ್ಬರನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಂಡೆಯೊಳಗೆ ಎರಡು ಸ್ಮಾರ್ಟ್‌ಫೋನ್‌ಗಳು, ಮೂರು ಪ್ಯಾಕೆಟ್ ಸಿಗರೇಟ್, ಹತ್ತು ಕಟ್ಟು ಬೀಡಿ ಹಾಗೂ ಬೆಂಕಿ ಪೊಟ್ಟಣಗಳು ಪತ್ತೆಯಾಗಿವೆ ಎಂದು ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್ ಶರಣಬಸವ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಅದೇ ದಿನ ರಾತ್ರಿ 10.50ರ ಸುಮಾರಿಗೆ ಮೂವರು ವ್ಯಕ್ತಿಗಳು ‘ಎ’ ಮತ್ತು ‘ಬಿ’ ಪಾಯಿಂಟ್ ನಡುವಿನ ಪ್ರದೇಶದಿಂದ ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಎಸೆಯಲು ಯತ್ನಿಸಿದ್ದಾರೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇದನ್ನು ಓದಿದ್ದೀರಾ? ಯಾದಗಿರಿ | ದಲಿತ ಮಹಿಳೆ ಜಯಮ್ಮ ಸಂಶಯಾಸ್ಪದ ಸಾವು : ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಈ ಘಟನೆಗಳ ಹಿನ್ನೆಲೆಯಲ್ಲಿ ಮಂಗಳವಾರ ಕಾರಾಗೃಹಗಳ ಇಲಾಖೆಯ ಡಿಐಜಿ ಟಿ.ಪಿ. ಶೇಷ ಅವರು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು ಎಂದು ಮೂಲಗಳು ತಿಳಿದು ಬಂದಿದೆ.





