ಕಾಯಕಮಿತ್ರ ವಜಾ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಅಮಾನತ್ತು ಮಾಡುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷ ವತಿಯಿಂದ ಶುಕ್ರವಾರ ತಾಲೂಕು ಪಂಚಾಯತ್ ಎದುರುಗಡೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸೇಡಂ ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷ ಸೇಡಂ ವಿಧಾನಸಭಾ ಘಟಕದ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಅಧಿಕಾರಿಗಳ ಮುಖಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಬಹುಜನ ಸಮಾಜ ಪಕ್ಷ ಅಧ್ಯಕ್ಷ ರೇವಣಸಿದ್ದಪ್ಪ ಎಸ್ ಸಿಂಧೆ ಮಾತನಾಡಿ, ‘ಸೇಡಂ ತಾಲೂಕಿನ ದುಗನೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಕಮಿತ್ರ ಅನುರಾಧಾ ಗಂಡ ಸಾಬಣ್ಣ ಅವರ ವಿರುದ್ಧ ಗಂಭೀರ ಆರೋಪಗಳಿದ್ದರೂ, ಕಳೆದ ಮೂರು ತಿಂಗಳಿನಿಂದ ಯಾವುದೇ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಬಿಎಸ್‌ಪಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕರು ಮತ್ತು ತಾಲೂಕು ಪಂಚಾಯತ್ ಸೇಡಂ ಅಧಿಕಾರಿಗಳನ್ನು ತಕ್ಷಣ ಅಮಾನತುಗೊಳಿಸಬೇಕೆಂದು’ ಒತ್ತಾಯಿಸಿ ಮನವಿ ಸಲ್ಲಿಸಿದರು.
‘ಈ ಕುರಿತು ದೇವನೂರ ಗ್ರಾಮದ ಗ್ರಾಮಸ್ಥರು ಈಗಾಗಲೇ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮೇಲಾಧಿಕಾರಿಗಳ ಪ್ರೋತ್ಸಾಹದಿಂದಲೇ ಕಾಯಕಮಿತ್ರರು ನಿರ್ಲಕ್ಷ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಣದ ಅಮಿಷದ ಅನುಮಾನವೂ ಇದೆ’ ಎಂದು ಆರೋಪಿಸಿದರು.
‘ಈ ವಿಷಯ ಸಂಬಂಧ 28 ನವೆಂಬರ್ 2025ರಂದು ಬಿಎಸ್‌ಪಿ ವತಿಯಿಂದ ಪ್ರೆಸ್‌ಮೀಟ್ ನಡೆಸಲಾಗಿದ್ದು, ಸೇಡಂ ಶಾಸಕರ ಗಮನಕ್ಕೂ ವಿಷಯ ಬಂದಿದ್ದರೂ ಅವರು ಜನರ ಪರವಾಗಿ ನಿಲ್ಲದೇ ಭ್ರಷ್ಟ ಅಧಿಕಾರಿಗಳ ಪರವಾಗಿ ನಿಂತಿರುವುದು ಬೇಸರ ತಂದಿದೆ’ ಎಂದು ಹೇಳಿದರು.
‘ನರೇಗಾ ಯೋಜನೆಯಡಿ ನಡೆದಿರುವ ಭ್ರಷ್ಟಾಚಾರದ ಕುರಿತು ಅರ್ಜಿ ಸಲ್ಲಿಸಿದರೂ ಸಹ ಸೇಡಂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳ ಪಾತ್ರವೂ ಇರಬಹುದೆಂಬ ಸಂಶಯವಿದೆ’ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ‘ಮನುಸ್ಮೃತಿ ದಹನ’ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ
‘ಆದ್ದರಿಂದ ಸಂಬಂಧಪಟ್ಟ ಕಾಯಕಮಿತ್ರರು ಹಾಗೂ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಕೈಗೊಂಡ ಕ್ರಮದ ಬಗ್ಗೆ ಲಿಖಿತ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು’ ಎಚ್ಚರಿಕೆ ನೀಡುವುದರ ಮೂಲಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಲಿಂಗಪ್ಪ, ಸಿದ್ರಾಮಪ್ಪ, ನರಸಪ್ಪ, ಕಾಶಪ್ಪ, ಚಂದ್ರಪ್ಪ, ಭೀಮಾಶಂಕರ, ಮಹಾಂತೇಶ, ಬಾಬಮ್ಮ, ಸಾವಿತ್ರಮ್ಮ ಮಲ್ಲಬಾದ, ಮಲ್ಲಮ್ಮ ಸಾಯಬಣ್ಣ, ಸಾಯಿಬು, ಸುಕ್ಕೆಮ್ಮ, ಅನಂತಮ್ಮ, ಮೊಗಲಮ್ಮ, ಮಾಣಿಕಮ್ಮ, ಸಾಬವ್ವ, ಶರಣಮ್ಮ, ಯಲ್ಲಮ್ಮ, ಸಾವಿತ್ರಮ್ಮ, ಈರಮ್ಮ ಸಾಬಣ್ಣ, ಶ್ರೀದೇವಿ, ನಾಗಮ್ಮ, ಅನಿತಾ, ಬುಗಮ್ಮ, ಸುಮ್ಮವ್ವ, ಚಂದ್ರಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





