ಭಯ, ಭಕ್ತಿ ಹಾಗೂ ಮೌಢ್ಯತೆಯಿಂದ ಮುಕ್ತವಾದ ಬೌದ್ಧ ಧರ್ಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷೆ (ಉತ್ತರ ಕರ್ನಾಟಕ) ಪುಟ್ಟಮಣಿ ದೇವಿದಾಸ್ ಅವರು ಹೇಳಿದರು.
ನಗರದ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಜಿಲ್ಲಾ ಘಟಕ, ಕಲಬುರಗಿ ವತಿಯಿಂದ ಆಯೋಜಿಸಲಾದ ಒಂದು ದಿನದ ಮಹಿಳಾ ದಮ್ಮ ಪ್ರಕಾಶನ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಶತಮಾನಗಳಿಂದ ಶೋಷಣೆಗೆ ಒಳಗಾದ ಸಮುದಾಯಕ್ಕೆ ಬುದ್ಧ ಧರ್ಮವೇ ಮೂಲ ಧರ್ಮವಾಗಿದ್ದು, ಬುದ್ಧನು ನಮ್ಮ ಪೂರ್ವಜನೆಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ತಿಳಿಸಿಕೊಟ್ಟಿದ್ದಾರೆ’ ಎಂದು ಅವರು ಹೇಳಿದರು.
‘ಅಂಬೇಡ್ಕರ್ ಅವರು ಬಿಎಸ್‌ಐ ಸಂಘಟನೆಯ ಮೂಲಕ ತೋರಿದ ಮಾರ್ಗವನ್ನು ಮುಂದುವರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಬೌದ್ಧ ಧರ್ಮ ಸ್ವೀಕಾರದೊಂದಿಗೆ 22 ಪ್ರತಿಜ್ಞೆಗಳನ್ನು ನಿಷ್ಠೆಯಿಂದ ಪಾಲಿಸುವ ಅಗತ್ಯವಿದೆ’ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ, ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಛನ್ನು ಭಂತೇಜಿ ಮತ್ತು ಸುಗಂದೋ ಭಂತೇಜಿಯವರು ಬುದ್ಧ ವಂದನೆ ನೆರವೇರಿಸಿ ಶಿಬಿರಕ್ಕೆ ಚಾಲನೆ ನೀಡಿದರು.

ಶಿಬಿರದಲ್ಲಿ ಸುರೇಶ್ ಕಾನೇಕರ್ ಅವರು ಉಪನ್ಯಾಸ ನೀಡಿದರು. ಡಾ. ಬಾಬುರಾವ ಅಣದುರೆ, ಬಬಿತಾಬಾಯಿ ರಾಹುಲ್ ಮತ್ತು ಉಷಾತಾಯಿ ಅವರು ದಮ್ಮ ಪ್ರಕಾಶನ ಕುರಿತು ತರಬೇತಿ ನೀಡಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಹೋರಾಟಗಾರರ ಬಂಧನವನ್ನು ಖಂಡಿಸಿ ಎಐಕೆಕೆಎಮ್‌ಎಸ್ ಪ್ರತಿಭಟನೆ
ಕಾರ್ಯಕ್ರಮವನ್ನು ಕವಿತಾ ಚಿಂಚೋಳಿ ನಿರೂಪಿಸಿದರು. ರಂಜನಿ ಸೋನು ಕಾಂಬಳೆ ಸ್ವಾಗತಿಸಿದರು. ಮಾಯಾ ಡಿ. ಕಾಂಬಳೆ ವಂದಿಸಿದರು.
ಈ ಸಂದರ್ಭದಲ್ಲಿ ಸಂಧ್ಯಾ ಕಾನೇಕರ್, ಡಾ. ವಿ.ಟಿ. ಕಾಂಬಳೆ, ದೇವರಾಜ್ ಕನ್ನಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





