ಸಾಮರ್ಥ್ಯ ಬಲವರ್ಧನೆ ಹಾಗೂ ಪಂಚಾಯತ್ ರಾಜ್ ಕಾಯ್ದೆ ಕುರಿತು ಜನವರಿ 9, 10 ಹಾಗೂ 11ರಂದು ಕಲಬುರಗಿ ತಾಲೂಕಿನ ಕುಸನೂರ ಗ್ರಾಮದ ದಾದಾ ಸಾಹೇಬ್ ಕಾಶಿರಾಂ ಮೆಮೋರಿಯಲ್ ಪದವಿ ಕಾಲೇಜು ಆವರಣದಲ್ಲಿ, ವಿ.ಟಿ.ಫೌಂಡೇಶನ್ ಗುಲ್ಬರ್ಗಾ ವತಿಯಿಂದ ತರಬೇತಿ ನಡೆಯಿತು.
ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ಬೆಂಗಳೂರು, ಪರಿವರ್ತನ್ ರೂರಲ್ ಅರ್ಬನ್ ಎಜುಕೇಶನಲ್ ಡೆವಲಪ್ಮೆಂಟ್ ಸೊಸೈಟಿ, ಯುವ ಚೇತನ ಸಂಸ್ಥೆ ಗುಲ್ಬರ್ಗಾ ಹಾಗೂ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಕಲಬುರಗಿ ಅವರ ಸಹಯೋಗದಲ್ಲಿ ಯುವಕ-ಯುವತಿಯರಿಗಾಗಿ ಮೂರು ದಿನಗಳ ಸಾಮರ್ಥ್ಯ ಬಲವರ್ಧನೆ ಹಾಗೂ ಪಂಚಾಯತ್ ರಾಜ್ ಇನ್ಸ್ಟಿಟ್ಯೂಷನ್ ಕಾಯ್ದೆ ಕುರಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ತರಬೇತಿಯ ವೇಳೆ ಸಂಪನ್ಮೂಲ ವ್ಯಕ್ತಿ ಲಕ್ಷ್ಮಣ ಜಾನೇಕಲ್ ಅವರು ಗ್ರಾಮ ಪಂಚಾಯತಿಗಳಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಹಾಗೂ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ವೀರೇಶ್ ಮಾನ್ವಿ ಅವರು ಪಂಚಾಯತ್ ರಾಜ್ ಇನ್ಸ್ಟಿಟ್ಯೂಷನ್ ಕಾಯ್ದೆ, ಗ್ರಾಮ ಸಭೆ, ವಾರ್ಡ್ ಸಭೆಗಳ ಮಹತ್ವ ಹಾಗೂ ಸ್ಥಳೀಯ ಸಂಸ್ಥೆಗಳ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೊ.ವಿ.ಟಿ. ಕಾಂಬ್ಳೆ, ಸುನಿತಾ ಕಾಂಬಳೆ, ಸಂತೋಷ್ ಗಾಯಕ್ವಾಡ್ ಹಾಗೂ ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಷನ್‌ನ ರಾಜ್ಯ ಸಂಯೋಜಕ ವಸಂತ್ ಕುಮಾರ್ ಪ್ರತಾಪೆ ಅವರು ಯುವಕರಿಗೆ ಪ್ರೇರಣಾತ್ಮಕ ಸಂದೇಶ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜೇವರ್ಗಿ ಮತಕ್ಷೇತ್ರದಲ್ಲಿ ₹906 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ತರಬೇತಿಯಲ್ಲಿ ಭಾಗವಹಿಸಿದ ಯುವಕ–ಯುವತಿಯರು, ಕಾರ್ಯಕ್ರಮವು ಗ್ರಾಮೀಣ ಆಡಳಿತ ವ್ಯವಸ್ಥೆ ಹಾಗೂ ನಾಗರಿಕ ಹಕ್ಕುಗಳ ಕುರಿತು ಸ್ಪಷ್ಟ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.





