ಯಡ್ರಾಮಿ ಹಾಗೂ ಜೇವರ್ಗಿ ತಾಲೂಕುಗಳ ರೈತರ ಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜೇವರ್ಗಿಯ ಅತಿಥಿ ಗೃಹದಲ್ಲಿ ರೈತರ ಸಭೆ ನಡೆಯಿತು.
ಸಭೆಯಲ್ಲಿ ಮಲ್ಲಾಬಾದ್ ಏತ ನೀರಾವರಿ ಯೋಜನೆಯನ್ನು ತಕ್ಷಣ ಚಾಲನೆಗೊಳಿಸಬೇಕು, ಇತ್ತೀಚಿನ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ತ್ವರಿತ ಪರಿಹಾರ ಒದಗಿಸಬೇಕು ಹಾಗೂ ತಾಲೂಕಿನಲ್ಲಿ ಮುಚ್ಚಲು ನಿರ್ಧರಿಸಿರುವ 115 ಸರ್ಕಾರಿ ಶಾಲೆಗಳ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.
ರೈತ ಮುಖಂಡರು ಮಾತನಾಡಿ, ‘ಮಲ್ಲಾಬಾದ್ ಏತ ನೀರಾವರಿ ಯೋಜನೆ ಕಾರ್ಯಾರಂಭಗೊಂಡರೆ ಸಾವಿರಾರು ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಬರಪೀಡಿತ ಪ್ರದೇಶದ ರೈತರಿಗೆ ಇದು ಜೀವಾಳವಾಗಿದ್ದು, ಯೋಜನೆಯ ನಿರಂತರ ವಿಳಂಬದಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಸರ್ಕಾರಿ ಶಾಲೆಗಳ ಮುಚ್ಚುವಿಕೆ ಗ್ರಾಮೀಣ ಮಕ್ಕಳ ಶಿಕ್ಷಣ ಹಾಗೂ ಭವಿಷ್ಯಕ್ಕೆ ಗಂಭೀರ ಧಕ್ಕೆ ಉಂಟುಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಲಾಯಿತು. ಜೊತೆಗೆ, ರೈತ ಹೋರಾಟಗಾರರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ಬೇಡಿಕೆಯೂ ಕೇಳಿಬಂತು.
ಇದನ್ನು ಓದಿದ್ದೀರಾ? ಕಲಬುರಗಿ | ಸಿಲಿಂಡರ್ ಸುರಕ್ಷತೆ ಕುರಿತು ಜಾಗೃತಿ : ಅಗ್ನಿ ಅವಘಡ ಮೋಕ್ ಡ್ರಿಲ್ ಮೂಲಕ ಅರಿವು
ಈ ಎಲ್ಲ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವಂತೆ ಸಭೆಯಲ್ಲಿ ಏಕಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ರೈತ ಮುಖಂಡರಾದ ಮಹೇಶ್ ಕುಮಾರ್ ರಾಥೋಡ್, ಬಾಬು ಪಾಟೀಲ್ ಮುತ್ತುಕೊಡ, ಎಳ್ವಾರ್ ಆದರ್ಶ ಗ್ರಾಮ ಸಮಿತಿಯ ಇಬ್ರಾಹಿಂ ಪಟೇಲ್, ರಾಜ ಪಟೇಲ್, ರೈತ ಸಂಘಟನೆಯ ಮುಖಂಡ ಸುಭಾಷ್ ಹೊಸಮನಿ, ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಕಾರ್ಯದರ್ಶಿ ಮಹಮ್ಮದ್ ಚೌದ್ರಿ ಕೊಡಚಿ, ಮಲ್ಲಿಕಾರ್ಜುನ್ ದೊಡ್ಮನಿ ಕೆಲ್ಲೂರು, ಗಿರೀಶ್ ತುಂಬ್ಗಿ ಸೇರಿದಂತೆ ಹಲವರು ಭಾಗವಹಿಸಿದ್ದರು.





