ಪ್ರತಿ ಕ್ವಿಂಟಲ್ ತೊಗರಿಗೆ ₹12,500 ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಲಬುರಗಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರವೂ ಮುಂದುವರೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಟ್ರ್ಯಾಕ್ಟರ್‌ಗಳು, ಎತ್ತಿನ ಬಂಡಿಗಳೊಂದಿಗೆ ಬೀಡುಬಿಟ್ಟಿರುವ ಪ್ರತಿಭಟನಾಕಾರರು ರಾತ್ರಿಯಿಡೀ ಬಯಲಿನಲ್ಲೇ ಕಳೆದರು.
ಮುಖಂಡ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ನಮ್ಮ ಅಹೋರಾತ್ರಿ ಹೋರಾಟದ ಭಾಗವಾಗಿ ಶುಕ್ರವಾರ ಮಧ್ಯಾಹ್ನ 2ಕ್ಕೆ ಟ್ರ್ಯಾಕ್ಟರ್, ಎತ್ತಿನಬಂಡಿ ಸಹಿತ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಗುವುದು. ನಮ್ಮ ನ್ಯಾಯಬದ್ಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತರಿಗೆ ಕೃಷಿಸಾಲ ನೀಡದ ಬ್ಯಾಂಕ್ ವಿರುದ್ಧ ಮಲೆಬೆನ್ನೂರಿನಲ್ಲಿ ರೈತಸಂಘ ಪ್ರತಿಭಟನೆ
“ರೈತರ ಗೋಳು ಕೇಳದ ಸರ್ಕಾರಕ್ಕೆ ಧಿಕ್ಕಾರ, ರೈತರಿಗೆ ಬೆಲೆ ನಷ್ಟ ಪರಿಹಾರ ಕೊಡಲೇಬೇಕು, ಬೆಳೆವಿಮೆ ಮಂಜೂರು ಮಾಡಲೇಬೇಕು” ಎಂಬ ಘೋಷಣೆಗಳನ್ನು ಮೊಳಗಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಐಕೆಎಸ್ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ, ಕೆಆರ್‌ಆರ್‌ಎಸ್ ಜಿಲ್ಲಾ ಗೌರವ ಅಧ್ಯಕ್ಷ ಉಮಾಪತಿ ಪಾಟೀಲ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಕರೆಪ್ಪಾ ಕರಗೊಂಡ ಇದ್ದಾರೆ.





