ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಕ್ತಿನಗರದಲ್ಲಿ ಭಾನುವಾರ ನಡೆದ ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಡ್ಯಾನ್ಸ್ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಶಕ್ತಿನಗರದ ಸಂಜಯ ರಾಜೇಶ್ ಗಾಯಕವಾಡ್ (23), ತುಷಾರ್ ರಾಜೇಶ್ ಗಾಯಕವಾಡ್ (24) ಹಾಗೂ ಬಸವನಗರದ ಹನುಮಾನ್ ದೇವರ ಗುಡಿ ಸಮೀಪದ ನಿವಾಸಿ ರಾಜವರ್ಧನ್ ಮಹಾದೇವಪ್ಪ ಸಂಗವಾರ (31) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಫೆಬ್ರವರಿ 22ರಂದು ಎಂ.ಜಿ. ರಸ್ತೆಯಲ್ಲಿರುವ ಆದರ್ಶ ಕಲ್ಯಾಣ ಮಂಟಪದಲ್ಲಿ ತುಷಾರ್ ಗಾಯಕವಾಡ ಅವರ ವಿವಾಹ ನೆರವೇರಿತ್ತು. ಅದೇ ದಿನ ಸಂಜೆ ಸುಮಾರು 7 ಗಂಟೆಗೆ ಶಕ್ತಿನಗರದಲ್ಲಿನ ಅವರ ಮನೆ ಎದುರು ನಡೆದ ಮದುವೆ ಮೆರವಣಿಗೆಯ ವೇಳೆ ತುಷಾರ್ ಗಾಯಕವಾಡ ಅವರು ಸಂಜಯ್‌ಗೆ ಚಾಕು ಹಾಗೂ ರಾಜವರ್ಧನ್‌ಗೆ ಮಚ್ಚು ನೀಡಿ ಡ್ಯಾನ್ಸ್ ಮಾಡಲು ಪ್ರಚೋದನೆ ನೀಡಿದ್ದಾನೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರ ಪ್ರದರ್ಶನ; ವೀಡಿಯೊ ವೈರಲ್
ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ವರ್ತಿಸಿದ್ದ ಹಿನ್ನೆಲೆಯಲ್ಲಿ ಮೂವರ ಸೇರಿದಂತೆ ಇತರರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





