ಕರ್ನಾಟಕ ಸರ್ಕಾರ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸಮಸ್ಯೆಗಳು ಹಾಗೂ ಅಗತ್ಯಗಳಿಗೆ ಸೂಕ್ತ ಪ್ರಾಮುಖ್ಯತೆ ನೀಡಲಾಗಿಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಅವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿ ಅವರು, ‘ಬಜೆಟ್‌ನಲ್ಲಿ ಮುಸ್ಲಿಂ ಸಮುದಾಯದ ಶಿಕ್ಷಣ ಹಾಗೂ ಆರ್ಥಿಕ ಹಿಂದುಳಿತವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸ್ಪಷ್ಟ ದೃಷ್ಟಿಕೋನ ಅಥವಾ ಹೊಸ ಯೋಜನೆಗಳನ್ನು ಘೋಷಿಸದಿರುವುದು ನಿರಾಶಾದಾಯಕ’ ಎಂದು ತಿಳಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತರು ಎಂದು ಒಟ್ಟಾಗಿ ಉಲ್ಲೇಖ ಮಾಡಲಾಗಿದ್ದು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಗುರಿಪಡಿಸಿದ ವಿಶೇಷ ಯೋಜನೆಗಳು ಹಾಗೂ ಸಮರ್ಪಕ ಅನುದಾನಗಳ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿವೇತನ, ವಸತಿ ನಿಲಯಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಕುರಿತು ಉಲ್ಲೇಖಿಸಿದ್ದರೂ, ಅವು ವಿವಿಧ ಇಲಾಖೆಗಳ ಸಾಮಾನ್ಯ ಕಲ್ಯಾಣ ಯೋಜನೆಗಳಾಗಿದ್ದು, ಅಲ್ಪಸಂಖ್ಯಾತರ ವಿಶೇಷ ಅಭಿವೃದ್ಧಿ ಯೋಜನೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಸಮುದಾಯ ಭವನಗಳ ನಿರ್ಮಾಣ ಕುರಿತು ನೀಡಿರುವ ಘೋಷಣೆಗಳು ಹೊಸ ಯೋಜನೆಗಳಲ್ಲ, ಹಳೆಯ ಯೋಜನೆಗಳ ಮುಂದುವರಿಕೆಯಷ್ಟೇ ಎಂದು ಅವರು ತಿಳಿಸಿದ್ದಾರೆ.
‘ಸಚ್ಚರ್ ಸಮಿತಿ ವರದಿ ಸೇರಿದಂತೆ ಹಲವು ಅಧ್ಯಯನಗಳು ಮುಸ್ಲಿಂ ಸಮುದಾಯದ ಶೈಕ್ಷಣಿಕ ಹಿಂದುಳಿತವನ್ನು ಸ್ಪಷ್ಟವಾಗಿ ತೋರಿಸಿವೆ. ಆದರೂ ಅದನ್ನು ನಿವಾರಿಸಲು ಯಾವುದೇ ಮಹತ್ವದ ಹೊಸ ಯೋಜನೆಗಳನ್ನು ಘೋಷಿಸದಿರುವುದು ಆತಂಕಕಾರಿ ವಿಷಯವಾಗಿದೆ’ ಎಂದು ಮುಬೀನ್ ಅಹ್ಮದ್ ಹೇಳಿದರು.
‘ಅಲ್ಪಸಂಖ್ಯಾತ ಯುವಕರಿಗೆ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಾವಕಾಶಗಳನ್ನು ಹೆಚ್ಚಿಸಲು ಸಮರ್ಪಕ ಕ್ರಮಗಳ ಕೊರತೆ ಇದೆ. ಜೊತೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಜೆಟ್‌ನಲ್ಲಿ ಗಮನಾರ್ಹ ಹೆಚ್ಚಳವೂ ಕಂಡುಬರುವುದಿಲ್ಲ’ ಎಂದು ಅವರು ಆರೋಪಿಸಿದರು.
‘ಕಳೆದ ವರ್ಷ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ₹4700 ಕೋಟಿ ಅನುದಾನ ನೀಡಲಾಗಿತ್ತು. ಆದರೆ ಈ ವರ್ಷ ಅದು ₹3400 ಕೋಟಿಗೆ ಕಡಿತಗೊಂಡಿರುವುದು ಸರ್ಕಾರದ ಆದ್ಯತೆಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.
‘ಮದರಸಾಗಳ ಆಧುನೀಕರಣ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಬೆಂಬಲ ಹಾಗೂ ನಗರ ಪ್ರದೇಶಗಳ ಅಲ್ಪಸಂಖ್ಯಾತರ ವಸತಿ ಸಮಸ್ಯೆಗಳು ಕೂಡ ಬಜೆಟ್‌ನಲ್ಲಿ ಸೂಕ್ತವಾಗಿ ಪರಿಗಣಿಸಲ್ಪಟ್ಟಿಲ್ಲ’ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಕೆಪಿಎಸ್ ಮ್ಯಾಗ್ನೆಟ್ ಶಾಲೆ ವಿರೋಧಿಸಿ ಸರ್ಕಾರಿ ಶಾಲೆ ಉಳಿಸಲು ಎಐಡಿಎಸ್‌ಒ ಪ್ರತಿಭಟನೆ
‘ಸರ್ಕಾರವು ತನ್ನ ಆದ್ಯತೆಗಳನ್ನು ಮರುಪರಿಶೀಲಿಸಿ, ಅಲ್ಪಸಂಖ್ಯಾತರಿಗೆ ನ್ಯಾಯ, ಸಮಾನತೆ ಹಾಗೂ ಅರ್ಥಪೂರ್ಣ ಅಭಿವೃದ್ಧಿಯನ್ನು ಖಚಿತಪಡಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ’ ಎಂದು ಅವರು ಹೇಳಿದರು.





