ಹುಬ್ಬಳ್ಳಿಯ ಸಮೀಪದ ಗ್ರಾಮವೊಂದರಲ್ಲಿ ನಡೆದ ಮರ್ಯಾದಾ ಹತ್ಯೆಯನ್ನು ಖಂಡಿಸಿ ಡಿವೈಎಫ್‌ಐ ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಕಲಬುರಗಿ ನಗರದ ತಿಮ್ಮಪುರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಲವಿತ್ರ ವಸ್ತ್ರದ ಮಾತನಾಡಿ, ‘ಸಮಾಜದಲ್ಲಿ ಪುರೋಹಿತಶಾಹಿ ಹಾಗೂ ಚತುರ್ವರ್ಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಯುವಜನರ, ಅದರಲ್ಲೂ ಮಹಿಳೆಯರ ಆಯ್ಕೆ ಸ್ವಾತಂತ್ರ್ಯಕ್ಕೆ ಸಮಾಜದಲ್ಲಿ ಇನ್ನೂ ಪೂರ್ಣ ಮಾನ್ಯತೆ ದೊರೆಯುತ್ತಿಲ್ಲ. ಮಹಿಳೆಯನ್ನು ಕೀಳಾಗಿ ಕಾಣುವ ಮನುವಾದಿ ಚಿಂತನೆಗಳನ್ನು ಸಮಾಜದ ಮೇಲೆ ಹೇರುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಜಾತಿ ಹೆಸರಿನಲ್ಲಿ ನಡೆಯುವ ಕೊಲೆಗಳು ಹಾಗೂ ದೌರ್ಜನ್ಯಗಳು ಖಂಡನೀಯವಾಗಿದ್ದು, ಇಂತಹ ಮರ್ಯಾದಾ ಹತ್ಯೆಗಳನ್ನು ತಡೆಯಲು ನಿರ್ದಿಷ್ಟ ಕಾನೂನು ರೂಪಿಸುವ ಅಗತ್ಯವಿದೆ. ಯುವಜನರ ಆಯ್ಕೆ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಗಟ್ಟಿಯಾದ ಕಾನೂನುಗಳನ್ನು ಜಾರಿಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಶಿಕ್ಷಕರ ಹುದ್ದೆಗಳು ಶೀಘ್ರ ಭರ್ತಿ : ಸಚಿವ ಶರಣ ಪ್ರಕಾಶ ಪಾಟೀಲ್ ಭರವಸೆ
‘ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಯುವತಿಯ ಪತಿಯ ಮನೆಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು’ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಾನಿಯಾ, ಎಸ್‌ಎಫ್ಐ ಸಂಘಟನೆಯ ಸರ್ವೇಶ ಮಾವಿನಕರ್, ಸುಜಾತಾ ವೈ, ಸೌಮ್ಯ ಬಿರಾದಾರ, ಸ್ವರಾಜ, ತಾಯಣ್ಣ, ನಿತಿಷ್, ನೇಸಮಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.





