ಲೆಂಟ್ ಮತ್ತು ರಂಜಾನ್ ಪವಿತ್ರ ಮಾಸಗಳ ಅಂಗವಾಗಿ ಮಸ್ಸಿಹ್ ಸೇನಾ ಹಾಗೂ ಜಮಾತೆ ಇ ಇಸ್ಲಾಮಿ ಹಿಂದ್ ಅವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಸಂಜೆ 5 ಗಂಟೆಗೆ ವಿಚಾರ ಸಂಕಿರಣ ಹಾಗೂ ಇಫ್ತಾರ್ ಕೂಟವನ್ನು ನಗರದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಪಾಸ್ಟರ್ ಶಿರೋಮಣಿ ಅವರು, ‘ಶಾಂತಿ, ಪ್ರೀತಿ, ಸೌಹಾರ್ದತೆ ಮತ್ತು ಅನನ್ಯತೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ರಂಜಾನ್ ಹಬ್ಬದ ಪ್ರಯುಕ್ತ ಹಿಂದೂ–ಮುಸ್ಲಿಂ ಸಮುದಾಯದವರು ಒಟ್ಟಾಗಿ ಉಪವಾಸ ಮುಕ್ತಾಯ ಮಾಡುವ ಮೂಲಕ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.

‘ಇಫ್ತಾರ್ ಕೂಟದ ವಿಶೇಷತೆಯಾಗಿ ಎಲ್ಲರಿಗೂ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಆಹಾರದ ಮಹತ್ವವನ್ನು ವಿವರಿಸಿದ ಅವರು, ಹಸಿದವರಿಗೆ ಅನ್ನ ನೀಡುವುದು ಅತ್ಯುತ್ತಮ ಸೇವೆ ಎಂದರು. ಎಲ್ಲ ಧರ್ಮಗಳನ್ನು ಪ್ರೀತಿಸಿ ಗೌರವಿಸುವ ಮನೋಭಾವ ಬೆಳೆಸಿದಾಗ ಸಮಾಜದಲ್ಲಿ ಸುಖ, ಶಾಂತಿ ಮತ್ತು ಬ್ರಾತೃತ್ವ ಭಾವನೆ ವೃದ್ಧಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ಮಿರಾಜ್ ಪಟೇಲ್ ತಾವರಗೇರಾ ಮಾತನಾಡಿ, ದೇವರ ಹೆಸರಿನಲ್ಲಿ ಜಾತಿ–ಧರ್ಮಗಳ ಭೇದಭಾವ ಉಂಟುಮಾಡುವ ಪ್ರಯತ್ನಗಳು ನಡೆಯುತ್ತಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರು. ದೇವರು ನಿಷ್ಪಕ್ಷಪಾತಿ; ನಾವೆಲ್ಲರೂ ಮೊದಲು ಮಾನವರು ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಸಾನಿಧ್ಯದಲ್ಲಿ ಫಾದರ್ ಸ್ಟಾನಿ ಲೋಬೋ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಧ್ಯಾರಾಜ ಸ್ಯಾಮುಯೆಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೊಹಮ್ಮದ್ ಜಿಯುಲ್ಲಾ ವಹಿಸಿದ್ದರು.yen
ಇದನ್ನು ಓದಿದ್ದೀರಾ? ಕಲಬುರಗಿ | ಭೂಸ್ವಾಧೀನ ಪರಿಹಾರ ವಿಳಂಬ ಆರೋಪ: ಜಿಲ್ಲಾಧಿಕಾರಿ ಕಾರು ಜಪ್ತಿ
ಈ ಸಂದರ್ಭದಲ್ಲಿ ಲಕ್ಷ್ಮೀಕಾಂತ ಹುಬಳಿ, ಎಂ.ಡಿ. ಅಬ್ದುಲ್ ಖಾದರ್, ಡಾ. ಕಿರಣ ಜಾರ್ಜ, ಸ್ಯಾಮುಯೆಲ್ ಬಾಲೆಕರ್, ಪಾಸ್ಟರ್ ಪಂಡಿತ ಎಸ್, ರಾಬೀನ್ ಪ್ರತಾಪ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.





