ನಗರದ ಖಾಸಗಿ ಶಾಲೆಯೊಬ್ಬ ಸಿಬ್ಬಂದಿಯೊಬ್ಬನು ಐವರು ಅಪ್ರಾಪ್ತ ಬಾಲಕಿಯರಿಗೆ ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಘಟನೆ ಶಿಕ್ಷಣ ಸಂಸ್ಥೆಗಳಲ್ಲಿನ ಮಕ್ಕಳ ಸುರಕ್ಷತೆ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
ಪೋಷಕರು ನೀಡಿದ ದೂರಿನ ಪ್ರಕಾರ, ಶಾಲೆಯಲ್ಲಿ ಓದುತ್ತಿರುವ ಐವರು ಅಪ್ರಾಪ್ತ ಬಾಲಕಿಯರನ್ನು ಸಿಬ್ಬಂದಿ ದಾವೂದ್ (60) ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾದ ಬಾಲಕಿಯರು ಶಾಲೆಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೋಷಕರಿಗೆ ವಿಷಯ ತಿಳಿದುಬಂದಿದ್ದು, ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನಂತರ ಆರೋಪಿಗೆ ಜಾಮೀನು ಮಂಜೂರು ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆರೋಪಿಗೆ ಜಾಮೀನು ಮಂಜೂರಾದ ವಿಚಾರಕ್ಕೆ ಮಹಿಳಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆ ಶಹೇನಾಜ್ ಅಕ್ತರ್ ನೇತೃತ್ವದಲ್ಲಿ ಮಹಿಳಾ ಸಂಘಟನೆ ಸದಸ್ಯರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ, ಜಾಮೀನು ರದ್ದುಪಡಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು’ ಆಗ್ರಹಿಸಿದ್ದಾರೆ.
‘ಶಾಲೆ ಎಂಬುದು ಮಕ್ಕಳಿಗೆ ಸುರಕ್ಷಿತ ತಾಣವಾಗಿರಬೇಕು. ಇಂತಹ ಘಟನೆಗಳು ಹೆಣ್ಣು ಮಕ್ಕಳ ಸುರಕ್ಷತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸುತ್ತವೆ. ಆರೋಪಿಯ ವಿರುದ್ಧ ಗಂಭೀರ ಸೆಕ್ಷನ್‌ಗಳನ್ನು ದಾಖಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,” ಎಂದು ಮಾನವ ಹಕ್ಕುಗಳ ಹೋರಾಟಗಾರ ರಿಯಾಜ್ ಖತೀಬ್ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಹೊಲಕ್ಕೆ ತೆರಳಿದ್ದ ಯುವಕ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆ
ಈ ಪ್ರಕರಣ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣೆ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಪೋಷಕರು ಮಕ್ಕಳ ನಡೆ-ನುಡಿಗಳಲ್ಲಿ ಬದಲಾವಣೆ ಕಂಡುಬಂದಲ್ಲಿ ತಕ್ಷಣ ಗಮನ ಹರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದು, ಸಾಕ್ಷ್ಯಾಧಾರಗಳ ಸಂಗ್ರಹಣೆ ಹಾಗೂ ಬಾಲಕಿಯರ ಹೇಳಿಕೆಗಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.





