ಬಸವಾದಿ ಶರಣರು ಮಾಡಿದ ತ್ಯಾಗ–ಬಲಿದಾನಗಳ ಸಂದೇಶವನ್ನು ಮನೆ-ಮನಕ್ಕೆ ತಲುಪಿಸುವ ಪ್ರಮುಖ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದಿಂದ ಹಮ್ಮಿಕೊಂಡಿರುವ ಫೆ.15ರಿಂದ ಮಾರ್ಚ್ 1ರವರೆಗೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಸುಕ್ಷೇತ್ರ ಬಿಜನಳ್ಳಿಯಿಂದ ಶರಣಭೂಮಿ ಬಸವಕಲ್ಯಾಣದವರೆಗೆ ನಡೆಯುವ ಕಲ್ಯಾಣ ನಡಿಗೆ ಮತ್ತು ಹರಳಯ್ಯ ಜ್ಯೋತಿಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಸೇಡಂ ತಾಲೂಕಿನ ಬಿಜನ್ನಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಇಷ್ಟಲಿಂಗ ಪೂಜೆ ನಡೆಯಿತು. ಬಳಿಕ ಕಲ್ಯಾಣ ನಡಿಗೆ ಮತ್ತು ಹರಳಯ್ಯಾ ಜ್ಯೋತಿಯಾತ್ರೆ ಸಮಾರಂಭವನ್ನು ಕಲಬುರಗಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಉದ್ಘಾಟಿಸಿದರು.
ಬಳಿಕ ಶಾಸಕರು ಮಾತನಾಡಿ, ʼಶರಣರಾದ ಕಲ್ಯಾಣಮ್ಮ-ಹರಳಯ್ಯಾ ದಂಪತಿಗಳು ಬಸವಣ್ಣನವರಿಗೆ ಅರ್ಪಿಸಿದ ಚೆಮ್ಮಾವುಗೆಯ ಬಿಜನ್ನಳ್ಳಿ ಸುಕ್ಷೇತ್ರ ಸರ್ವ ರೀತಿಯಲ್ಲೂ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತೇನೆ. ವಚನ ಸಾಹಿತ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಶರಣರ ಚಿಂತನೆಗಳು ಜನಮಾನಸಕ್ಕೆ ತಲುಪಿಸುವ ಈ ಕಲ್ಯಾಣ ನಡಿಗೆ ಕಾರ್ಯ ಶ್ಲಾಘನೀಯʼ ಎಂದರು.

ಕಲ್ಯಾಣ ನಡಿಗೆಯ ರೂವಾರಿ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷರೂ ಆದ ಬಸವಕುಮಾರ ಪಾಟೀಲ ಮಾತನಾಡಿ, ʼಶರಣರು ನಮಗಾಗಿ ಮಾಡಿದ ತ್ಯಾಗ-ಬಲಿದಾನ ಸ್ಮರಿಸುವ ಕಾರ್ಯಕ್ರಮ ಇದಾಗಿದೆ. ಶರಣರ ಸಂದೇಶಗಳನ್ನು ಮನೆ-ಮನೆಗೆ, ಮನ-ಮನಕ್ಕೆ ತಲುಪಿಸುವುದು ಇಂದಿನ ನಾಗರಿಕ ಸಮಾಜದ ಆದ್ಯ ಕರ್ತವ್ಯವಾಗಿದೆ. ಈ ಪಾದಯಾತ್ರೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ದೇಶದ ಸತ್ಪ್ರಜೆಗಳಾಗುವಂತೆ ಮಾರ್ಗದರ್ಶನ ಮಾಡಲಾಗುತ್ತದೆʼ ಎಂದರು.
ʼಪಾದಯಾತ್ರೆ ವೇಳೆ ಕೃಷಿ, ಪರಿಸರ, ಆರೋಗ್ಯ, ಸೌಹಾರ್ದತೆ, ಭಾವೈಕ್ಯತೆ, ಸೇವೆ, ಸಹಕಾರ ಮುಂತಾದ ಮಹತ್ವಪೂರ್ಣ ವಿಷಯಗಳ ಕುರಿತು ಉಪನ್ಯಾಸ ಗೋಷ್ಠಿಗಳು ಏರ್ಪಡಿಸಲಾಗಿದೆ. ಎಲ್ಲರನ್ನೂ ಪ್ರೀತಿಸುವ ಮತ್ತು ಗೌರವಿಸುವ ವಿಶ್ವ ಕುಟುಂಬತ್ವದ ಭಾವ ಬೆಳೆಸುವುದು, ‘ದುರ್ಗುಣ ದುಶ್ಚಟಗಳ ಭಿಕ್ಷೆ, ಸದ್ಗುಣ ಸನ್ನಡತೆಯ ದೀಕ್ಷೆ’ಯ ಸಂಕಲ್ಪ ಹೊತ್ತು ದುರ್ಗುಣ ದುಶ್ಚಟಗಳ ಭಿಕ್ಷೆ ಕೇಳುವುದು ಸೇರಿದಂತೆ ಮುಖ್ಯವಾಗಿ ಬಿಜನ್ನಳ್ಳಿ ಕ್ಷೇತ್ರ ಅಭಿವೃದ್ಧಿಗೊಳಿಸುವುದು ಯಾತ್ರೆ ಮುಖ್ಯ ಉದ್ದೇಶವಾಗಿದೆʼ ಎಂದರು.
ʼಕಲ್ಯಾಣ ನಡಿಗೆಯಲ್ಲಿ ಬಸವಾನುಯಾಯಿಗಳು, ಸಾಮಾಜಿಕ ಚಿಂತಕರು, ಹೋರಾಟಗಾರರು ಜೊತೆಯಾಗಲಿದ್ದಾರೆ. ಪ್ರತಿದಿನ ಒಂದೊಂದು ಗ್ರಾಮದಲ್ಲಿ ಸಂಜೆ 5ಗಂಟೆಗೆ ಗ್ರಾಮಸ್ಥರೊಂದಿಗೆ ‘ಕಲ್ಯಾಣ ನಡಿಗೆ’, ಆರು ಗಂಟೆಗೆ ಸಾರ್ವಜನಿಕ ಸಮಾರಂಭ ಉಪನ್ಯಾಸ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ‘ಕಲ್ಯಾಣ ಕ್ರಾಂತಿ’ ನಾಟಕ ಜರುಗಲಿದೆ’ ಎಂದು ವಿವರಿಸಿದರು.
ಸಾನಿಧ್ಯ ವಹಿಸಿದ ಬಸವಕಲ್ಯಾಣ ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಅವರು ಮಾತನಾಡಿ, ʼಲಿಂಗಾಯತ ಧರ್ಮೀಯರ ಪವಿತ್ರ ಕ್ಷೇತ್ರ ಬಿಜನ್ನಳ್ಳಿ ಗ್ರಾಮ. ಲಿಂಗಾಯತ ಧರ್ಮಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಹರಳಯ್ಯ ದಂಪತಿ ಇಡೀ ಮನುಕುಲಕ್ಕೆ ಮಾದರಿ. ಶರಣರ ವಚನ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕುʼ ಎಂದು ನುಡಿದರು.

ʼಮೌಲ್ಯಾಧಾರಿತ ಮಾನವೀಯತೆಯ ಸಂದೇಶ ಸಾರುವ ಕೆಲಸ ಕಲ್ಯಾಣ ನಡಿಗೆಯ ಮುಖ್ಯ ಉದ್ದೇಶವಾಗಿದೆ. ವಚನ ಸಾಹಿತ್ಯದಲ್ಲಿ ಅನುಭವದ ಸಾಹಿತ್ಯವಿದೆ. ದಯವೇ ಧರ್ಮದ ಮೂಲ ಆಶಯವಿದೆ. ಬಸವಣ್ಣನವರ ಕಾಯಕ ತತ್ವ ಜಾಗತಿಕ ಮಟ್ಟಕ್ಕೆ ಪ್ರೇರಣೆಯಾಗಿದ್ದು, ಇತಿಹಾಸ ಮರುಸೃಷ್ಟಿಸುವ ಐತಿಹಾಸಿಕ ನಡಿಗೆ ಜ್ಯೋತಿ ಯಾತ್ರೆಯಾಗಿದೆʼ ಎಂದರು.
ಶಂಕರಲಿಂಗ ಸ್ವಾಮೀಜಿ ಧುಮ್ಮನಸೂರ್ ಮಾತನಾಡಿ, ʼಈ ಪಾದಯಾತ್ರೆಯು ಸಮಾನತೆ ಸಾರುವ ಐತಿಹಾಸಿಕ ನಡಿಗೆಯಾಗಿದೆ. ಎಲ್ಲರೂ ಒಗ್ಗಟ್ಟಾಗಿ ಲಿಂಗಾಯತ ಧರ್ಮ ಕಟ್ಟಬೇಕುʼ ಎಂದರು.
ಇದನ್ನೂ ಓದಿ : ಬೀದರ್ | ಮಹಾ ಶಿವರಾತ್ರಿ : ವಿವಿಧೆಡೆ ಸಾಮೂಹಿಕ ಇಷ್ಟಲಿಂಗ ಪೂಜೆ ಸಂಭ್ರಮ
ಸಮಾರಂಭದಲ್ಲಿ ಪ್ರಮುಖರಾದ ಮಾಹಾಂತಪ್ಪ ಸಂಗಾವಿ, ಅಪ್ಪರಾವ ಅಕೋಣೆ, ಕಾಶಿರಾಯ ನಂದೂರಕರ್, ಸಾಹಿತಿ ಸಂಗಮೇಶ ಎನ್. ಜವಾದಿ, ರಾಜು ಕೋಟೆ, ರವೀಂದ್ರ ಶಾಬಾದಿ, ವೀರಣ್ಣಾ ಕೊಲರಳ್ಳಿ, ಶಂಕ್ರಪ್ಪ ಪಾಟೀಲ, ನಳಿನಿ ಮಾಹಾಗಾಂವಕರ್, ಬಸವರಾಜ ಮೂಲಗೆ, ಸೋಮಶೇಖರ ಮಾಲಿ ಪಾಟೀಲ್, ಮನೋಜಕುಮಾರ ಬುಕ್ಕಾ, ಶಾಂತಲಿಂಗ ಪಾಟೀಲ ಕೊಳಕೂರ್, ಪಂಡಿತ ಬಾಳುರೆ, ಭಗವಂತರಾವ ಪಾಟೀಲ, ರಮೇಶ ಸಲಗರ್, ವೈಜಿನಾಥ ಸಜ್ಜನಶೆಟ್ಟಿ, ಕರಬಸಪ್ಪ ಕಟಗಿ, ಭೀಮಶಾ ಹಜ್ಜರಗಿ, ಬಾಬುರಾವ್ ಪಾಟೀಲ ಚಿತ್ತಕೊಟಾ, ಶ್ರಾವಣಕುಮಾರ ಹಮ್ಮಿಲಪೂರಕರ್ ಸೇರಿ ಕಲಬುರ್ಗಿ, ಬೀದರ, ಬೆಳಗಾವಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಹಾಗೂ ತೆಲಂಗಾಣ ರಾಜ್ಯಗಳ ವಿವಿಧ ಕಡೆಯಿಂದ ಬಸವಾಭಿಮಾನಿಗಳು ಯಾತ್ರೆಯಲ್ಲಿ ಪಾಲ್ಗೊಂಡರು.





