ಜ್ಞಾನವು ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜೀವನಕ್ಕೆ ಬೆಳಕು ನೀಡುತ್ತದೆ. ಅನುಭವ, ಶಿಕ್ಷಣ ಮತ್ತು ವಿವೇಚನೆಯಿಂದ ಗಳಿಸಿದ ಜ್ಞಾನ ಜೀವನಪೂರ್ತಿ ವ್ಯಕ್ತಿಯೊಂದಿಗೆ ಉಳಿಯುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಹಾಗೂ ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ. ದಶರಥ ನಾಯಕ್ ಹೇಳಿದರು.
ಶುಕ್ರವಾರ ಗುಲ್ಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ, ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಕೇವಲ ಪ್ರಮಾಣಪತ್ರಕ್ಕಾಗಿ ಓದುವುದಕ್ಕೆ ಸೀಮಿತವಾಗದೇ ಜ್ಞಾನವನ್ನು ಸಂಪಾದಿಸಬೇಕು. ಹೊಸ ಸನ್ನಿವೇಶಗಳು ಮತ್ತು ಸವಾಲುಗಳನ್ನು ಎದುರಿಸಲು ಹಾಗೂ ವೈಯಕ್ತಿಕ ಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ವಿದ್ಯಾರ್ಥಿಗಳು ಉತ್ತಮ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಉತ್ತಮ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯನ್ನು ಸಮಾಜವು ಗೌರವದಿಂದ ಗುರುತಿಸುತ್ತದೆ ಎಂದು ಹೇಳಿದರು.
ಇತಿಹಾಸವು ಕೇವಲ ಗತಕಾಲದ ಕಥೆಯಲ್ಲ; ಅದು ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಹಾಗೂ ಭವಿಷ್ಯವನ್ನು ರೂಪಿಸಲು ಅಗತ್ಯವಾದ ಅರಿವು ನೀಡುತ್ತದೆ. ವಿಶ್ವವಿದ್ಯಾಲಯದ ಓದು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಂಶೋಧನಾ ಕೌಶಲ ಮತ್ತು ಸಂಸ್ಕೃತಿ ಅರಿವನ್ನು ವಿಸ್ತರಿಸುತ್ತದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ನಿವೃತ್ತ ಕೆಎಎಸ್ ಅಧಿಕಾರಿ ದಿವಾಕರ್ ಎಸ್ ಮಾತನಾಡಿ, ಇತಿಹಾಸ ಮಾನವನಿಗೆ ಮಾನವೀಯತೆಯ ಪಾಠ ಕಲಿಸುತ್ತದೆ. ದೇಶದ ಮಹನೀಯರ ಇತಿಹಾಸವನ್ನು ಓದಿದಾಗ ಸಂಪೂರ್ಣ ಇತಿಹಾಸದ ಅರಿವು ಮೂಡುತ್ತದೆ. ಜೀವನದಲ್ಲಿ ಸಾಧನೆ ಮಾಡಲು ದೃಢ ಸಂಕಲ್ಪ ಇದ್ದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | “ಯುವಜನರಿಗೆ ನಿರಾಸೆ ಮೂಡಿಸಿದ ಬಜೆಟ್”; ಎಐಡಿವೈಒ ಆರೋಪ
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಡಾ. ರತ್ನಾಕರ್ ಹೊಸಮನಿ, ಕೃಷ್ಣಕಾಂತಿ, ಸುರೇಖಾ, ಪಾರ್ವತಿ ಗುಬ್ಬನ, ಹಣಮೇಶ ಹಾಗೂ ಸಮೀರ್ ಸಿಂಧೆ ಉಪಸ್ಥಿತರಿದ್ದರು. ಅಣವೀರಗೌಡ ಹಾಗೂ ಸುದಾಶ್ರೀ ಬಿಳವಾರ ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ಮಂದೋಲಕರ್ ಮತ್ತು ರಾಚಯ್ಯ ಸ್ವಾಮಿ ವಂದಿಸಿದರು.





