ಕೇಂದ್ರ ಸರ್ಕಾರವು ಗ್ರಾಮೀಣ ಜನತೆಗೆ ಉದ್ಯೋಗ ಖಾತ್ರಿ ನೀಡುವ ಉದ್ದೇಶದಿಂದ ಜಾರಿಗೊಳಿಸಿದ್ದ ಎಂಜಿ ನರೇಗಾ ಕಾಯ್ದೆಯನ್ನು ರದ್ದುಪಡಿಸಿ, ಅದರ ಬದಲಿಗೆ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ 2025 (ವಿಬಿ, ಜಿ ಆರ್ ಎ ಎಂ ಜಿ) ಅನ್ನು ಜಾರಿಗೆ ತರುವ ನಿರ್ಧಾರವನ್ನು ವಿರೋಧಿಸಿ ಎಡಪಕ್ಷಗಳ ಒಕ್ಕೂಟದ ನೇತೃತ್ವದಲ್ಲಿ ಸಿಪಿಐ, ಸಿಪಿಐ(ಎಂ), ಎಸ್‌ಯುಸಿಐ(ಸಿ) ಪಕ್ಷಗಳ ವತಿಯಿಂದ ಸೋಮವಾರ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜಿಲ್ಲಾಡಳಿತ ಮುಖಾಂತರ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಎಸ್‌ಯುಸಿಐ(ಸಿ)ಪಕ್ಷದ ಜಿಲ್ಲಾ ಸಮಿತಿ ಸದಸ್ಯ ದೇಸಾಯಿ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹಾಗೂ ಸಿಪಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಪ್ರಭುದೇವ್ ಯಳಸಂಗಿ ಅವರು ಮಾತನಾಡಿ, ಎಂಜಿ ನರೇಗಾ ಕಾಯ್ದೆ ಗ್ರಾಮೀಣ ಕಾರ್ಮಿಕರಿಗೆ ಜೀವಾಳವಾಗಿದ್ದು, ಅದನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನವನ್ನು ಎಡಪಕ್ಷಗಳು ತೀವ್ರವಾಗಿ ವಿರೋಧಿಸುತ್ತವೆ’ ಎಂದು ಅವರು ತಿಳಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಟಿ ಶಶಿಧರ್ ಭೋಧಿಮಂಡಲ ಕಲಾ ಮತ್ತು ಶಿಕ್ಷಣ ಸಂಸ್ಥೆ ವತಿಯಿಂದ ಸಂಗೀತ ಕಲಾವಿದರ ಸಂಭ್ರಮ
ಈ ಸಂದರ್ಭದಲ್ಲಿ ಎಸ್. ಎಂ. ಶರ್ಮಾ, ಮಹೇಶ್ ನಾಡಗೌಡ, ಮಹೇಶ್ ಎಸ್.ಬಿ., ಶಿವರಾಜ್ ಗಂಗಾಣಿ, ಶಿವರಾಜ್, ಈಶ್ವರ್, ವಿಶಾಲಾಕ್ಷಿ ಪಾಟೀಲ್, ವರುಣ್ ದೇಸಾಯಿ, ಸಂತೋಷ್ ಕುಮಾರ್ ಹಿರವೇ, ಶ್ರೀಮಂತ ಬಿರಾದಾರ್, ಸುಧಾಮ್ ಧನ್ನಿ, ಮೀನಾಕ್ಷಿ ಬಾಳಿ, ಲವಿತ್ರ ವಸ್ತ್ರದ್, ಭೀಮಾಶಂಕರ್ ಮಾಡಿಯಾಲ್, ಮೌಲಾ ಮುಲ್ಲಾ, ಸೂರ್ಯಕಾಂತ ಸೊನ್ನದ್ ಸೇರಿದಂತೆ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





