ವೆನೆಜುವೇಲಾ ದೇಶದ ಮೇಲೆ ಅಮೇರಿಕಾ ಸಾಮ್ರಾಜ್ಯಶಾಹಿ ನಡೆಸುತ್ತಿರುವ ದಾಳಿ ಹಾಗೂ ಅಧ್ಯಕ್ಷ ನಿಕೋಲಸ್ ಮದುರೊ ಅವರ ಅಪಹರಣವನ್ನು ಖಂಡಿಸಿ ಸಿಪಿಐ, ಸಿಪಿಐ(ಎಂ) ಮತ್ತು ಎಸ್‌ಯುಸಿಐ(ಸಿ) ಎಡಪಕ್ಷಗಳ ನೇತೃತ್ವದಲ್ಲಿ ಶನಿವಾರ ಕಲಬುರಗಿಯ ಎಸ್‌ವಿಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಅಮೇರಿಕಾ ಸಾಮ್ರಾಜ್ಯಶಾಹಿಯ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು ವೆನೆಜುವೇಲಾ ವಿರುದ್ಧ ಅಮೆರಿಕ ನಡೆಸುತ್ತಿರುವ ಮಿಲಿಟರಿ ಹಾಗೂ ರಾಜಕೀಯ ದಾಳಿಗಳು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದರು. ಯಾವುದೇ ಪುರಾವೆಗಳಿಲ್ಲದೆ ‘ನರ್ಕೊ ಟೆರರಿಸಂ’ ಹೆಸರಿನಲ್ಲಿ ನಾಗರಿಕ ದೋಣಿಗಳ ಮೇಲೆ ಬಾಂಬ್ ದಾಳಿ ನಡೆಸಿ ಅಮಾಯಕ ಜನರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಖಂಡಿಸಿದರು.

‘ವೆನೆಜುವೇಲಾದ ಅಪಾರ ತೈಲ ಹಾಗೂ ಖನಿಜ ಸಂಪತ್ತನ್ನು ವಶಪಡಿಸಿಕೊಳ್ಳುವ ದುರುದ್ದೇಶದಿಂದಲೇ ಅಮೇರಿಕಾ ಈ ಆಕ್ರಮಣ ನಡೆಸುತ್ತಿದೆ. ಚವೇಝ್ ಆರಂಭಿಸಿದ ಬೊಲಿವಾರಿಯನ್ ಕ್ರಾಂತಿ ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಅಮೇರಿಕಾ ಸಾಮ್ರಾಜ್ಯಶಾಹಿಯನ್ನು ಆತಂಕಗೊಳಿಸಿದ್ದೇ ಈ ದಾಳಿಗಳ ಮೂಲ ಕಾರಣ’ ಎಂದು ಎಡಪಕ್ಷಗಳು ಅಭಿಪ್ರಾಯಪಟ್ಟವು.
‘ಮದುರೊ ಅವರ ಅಪಹರಣದ ಮೂಲಕ ವೆನೆಜುವೇಲಾದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಆದರೆ ವೆನೆಜುವೇಲಾ ಸರ್ಕಾರ ಮತ್ತು ಜನತೆ ದೃಢವಾಗಿ ಪ್ರತಿರೋಧಿಸುತ್ತಿದ್ದಾರೆ. ಅಮೇರಿಕಾ ಯುದ್ಧ ಸಾರಿದರೆ ಅದು ಮತ್ತೊಂದು ವಿಯೇಟ್ನಾಂ ಆಗಲಿದೆ, ಇರಾಕ್ ಅಥವಾ ಲಿಬಿಯಾ ಅಲ್ಲ’ ಎಂದು ಎಚ್ಚರಿಸಿದರು.

ಪ್ರತಿಭಟನೆಯ ಅಧ್ಯಕ್ಷತೆಯನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ವಹಿಸಿದ್ದರು. ಎಸ್‌ಯುಸಿಐ(ಸಿ) ಜಿಲ್ಲಾ ಸಮಿತಿ ಸದಸ್ಯ ಎಸ್. ಎಂ. ಶರ್ಮಾ ಹಾಗೂ ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಕಾಮ್ರೇಡ್ ಮೌಲಾ ಮುಲ್ಲಾ ಮಾತನಾಡಿ, ವೆನೆಜುವೇಲಾ ಜನರ ಹೋರಾಟಕ್ಕೆ ಭಾರತೀಯ ಎಡಪಕ್ಷಗಳ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಮಲ್ಲಾಬಾದ್ ಏತ ನೀರಾವರಿ ತಕ್ಷಣ ಚಾಲನೆಗೆ ಆಗ್ರಹ
ಈ ಸಂದರ್ಭದಲ್ಲಿ ವಿ ಜಿ ದೇಸಾಯಿ, ಮಹೇಶ್ ಎಸ್ ಬಿ, ಮಹೇಶ್ ನಾಡಗೌಡ, ಸೀಮಾ ದೇಶಪಾಂಡೆ, ಜಗನ್ನಾಥ್ ಎಸ್ ಎಚ್, ಹಣಮಂತ ಎಸ್ ಎಚ್, ಸಂತೋಷ್ ಕುಮಾರ್ ಹಿರವೆ, ಮೀನಾಕ್ಷಿ ಬಾಳಿ, ಪರಶುರಾಮ್, ಸುಧಾಮ್ ಧನ್ನಿ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ್, ಶಾಂತಾ ಘಂಟಿ, ಶ್ರೀಮಂತ ಬಿರಾದರ್, ಲವಿತ್ರಾ ವಸ್ತ್ರದ್, ಭೀಮಾಶಂಕರ್ ಮಾಡ್ಯಾಳ್, ಸಾಜೀದ್ ಅಹ್ಮದ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಾಲ್ಗೊಂಡಿದ್ದರು.





