ಗುಲ್ಬರ್ಗಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕ ಡಾ. ರಾಜಕುಮಾರ ದಣ್ಣೂರ ಅವರಿಗೆ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಲಂಡನಕರ್ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಡಾ. ದಣ್ಣೂರ ಅವರು ಶನಿವಾರ ಕುಲಪತಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ.
ಕಳೆದ ಏಳು ವರ್ಷಗಳಿಂದ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರಾಜಕುಮಾರ ದಣ್ಣೂರ, 2026ರ ಶೈಕ್ಷಣಿಕ ಸಾಲಿನಲ್ಲಿ ತಮ್ಮ ಬೋಧನಾ ಅವಧಿಯನ್ನು ಏಕಾಏಕಿ 12 ಗಂಟೆಗಳಿಗೆ ಇಳಿಸಲಾಗಿದೆ ಎಂದು ದೂರಿದ್ದಾರೆ. ಮೆರಿಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ತಮಗೆ 16 ಗಂಟೆಗಳ ಬೋಧನಾ ಅವಧಿಗೆ ಅರ್ಹತೆ ಇದ್ದರೂ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಮನವಿ ಸಲ್ಲಿಸಲು ಜನವರಿ 16ರಂದು ಕುಲಸಚಿವರ ಕಚೇರಿಗೆ ತೆರಳಿದ ವೇಳೆ, ಕುಲಸಚಿವರು ಅಶ್ಲೀಲ ಪದಗಳಿಂದ ನಿಂದಿಸಿ, “ಏನು ಮಾಡ್ಕೋತೀಯಾ?” ಎಂದು ಬೆದರಿಕೆ ಹಾಕಿ ಹಲ್ಲೆಗೆ ಮುಂದಾದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪರಿಸ್ಥಿತಿ ತೀವ್ರಗೊಂಡ ಹಿನ್ನೆಲೆಯಲ್ಲಿ ಕಚೇರಿ ಪರಿಚಾರಕರು ಮಧ್ಯಪ್ರವೇಶಿಸಿ ಅವರನ್ನು ಹೊರಗೆ ಕಳುಹಿಸಿದರು ಎಂದು ತಿಳಿಸಿದ್ದಾರೆ.
ಘಟನೆಯ ಬಳಿಕ ತನ್ನ ಜೀವಕ್ಕೆ ಅಪಾಯವಿದ್ದು, ವಿಶ್ವವಿದ್ಯಾಲಯ ಹಾಗೂ ನಗರದಲ್ಲಿ ಒಬ್ಬಂಟಿಯಾಗಿ ಸಂಚರಿಸುವ ವೇಳೆ ಆತಂಕ ಎದುರಿಸುತ್ತಿದ್ದೇನೆ ಎಂದು ಡಾ. ದಣ್ಣೂರ ಹೇಳಿದ್ದಾರೆ. ತನ್ನ ಮೇಲೆ ಯಾವುದೇ ಅನಾಹುತ ಸಂಭವಿಸಿದರೆ ಅದರ ಸಂಪೂರ್ಣ ಹೊಣೆ ಕುಲಸಚಿವರ ಮೇಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ಸೂಕ್ತ ರಕ್ಷಣೆ ಹಾಗೂ ನ್ಯಾಯ ಒದಗಿಸುವಂತೆ ಅವರು ಕುಲಪತಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಲುಂಬಿನಿ ಗಾರ್ಡನ್‌ನಲ್ಲಿ ದೆವ್ವದ ಸಂಚಾರವೆಂಬ ವಂದತಿ; ಜ.18ರಂದು ವೈಜ್ಞಾನಿಕ ಜಾಗೃತಿ ಕಾರ್ಯಕ್ರಮ
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಕುಲಸಚಿವ ಪ್ರೊ. ರಮೇಶ್ ಲಂಡನಕರ್ , ‘ವಿಭಾಗದ ಅಧ್ಯಕ್ಷರು, ಡೀನ್ ಹಾಗೂ ವಿಷಯ ಪರಿಣಿತರನ್ನೊಳಗೊಂಡ ಸಮಿತಿಯು ಅತಿಥಿ ಉಪನ್ಯಾಸಕರ ನೇರ ಸಂದರ್ಶನ ನಡೆಸಿ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿದೆ. ಕುಲಪತಿಗಳ ನಿರ್ಣಯದ ಬಳಿಕ ನಾನು ಕೇವಲ ಸಹಿ ಮಾಡುವ ಅಧಿಕಾರವಷ್ಟೇ ಹೊಂದಿದ್ದೇನೆ. ಆಯ್ಕೆ ಮಾಡುವ ಯಾವುದೇ ಅಧಿಕಾರ ನನಗೆ ಇಲ್ಲ. ಡಾ. ರಾಜಕುಮಾರ ದಣ್ಣೂರ ಅವರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅನ್ಯಾಯವಾಗಿದೆ ಎಂದು ಭಾವಿಸಿದರೆ ಕಾನೂನು ಮಾರ್ಗವನ್ನು ಅನುಸರಿಸಲಿ ಎಂದು ನಾನು ತಿಳಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.





