ನಗರದ ಹೊರವಲಯದ ಶಹಾಬಾದ್ ರಸ್ತೆಯ ಮರತೂರ ಕ್ರಾಸ್ ಬಳಿ ಶನಿವಾರ ರಾತ್ರಿ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಅಪಘಾತದಲ್ಲಿ ಲಾರಿ ಚಾಲಕ ಮೋಹನ್ ಅಬ್ಬು ಸೈಯದ್ ಜಾಗೀರದಾರ (26), ಸೋಲಾಪುರದ ಅಭಿಷೇಕ ನಗರ ನಿವಾಸಿ ಹಾಗೂ ಸುಮಾರು 45 ವರ್ಷದ ಅಪರಿಚಿತ ಬೈಕ್ ಸವಾರ ಮೃತಪಟ್ಟಿದ್ದಾರೆ.
‘ತಮಿಳುನಾಡಿನಿಂದ ಮಹಾರಾಷ್ಟ್ರದ ಲಾತೂರಿಗೆ ಸರಕು ಸಾಗಿಸುತ್ತಿದ್ದ ಲಾರಿಗೆ ಮರ್ತೂರ ಕ್ರಾಸ್ ಬಳಿ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಲಾರಿ ಮುಂದೆ ಸಾಗುತ್ತಿದ್ದ ಮೋಟರ್ ಸೈಕಲ್‌ಗೆ ಗುದ್ದಿದೆ.’ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಅನವಾರ ಗ್ರಾಮದಲ್ಲಿ ಸಾರಿಗೆ ಬಸ್ ನಿಲುಗಡೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಮನವಿ
ಅಪಘಾತದ ತೀವ್ರತೆಗೆ ಲಾರಿ ಚಾಲಕ ಮತ್ತು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ತಮಿಳುನಾಡು ಮೂಲದ ಲಾರಿ ಚಾಲಕ ಮಾರಿಯಪ್ಪನ್ ನೀಡಿದ ದೂರಿನ ಮೇರೆಗೆ ಸಂಚಾರಿ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





