ಕಲಬುರಗಿ ತಾಲೂಕಿನ ಇಟಗಾ ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)–ಮ್ಯಾಗ್ನೆಟ್ ಶಾಲೆ ಯೋಜನೆಯಡಿ ವಿಲೀನಗೊಳಿಸಿ ಮುಚ್ಚಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ, ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ಪೋಷಕರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯಾದ್ಯಂತ ಕೆಪಿಎಸ್–ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಯೋಜನೆ ಜಾರಿಯಲ್ಲಿದ್ದು, ಅದರ ಭಾಗವಾಗಿ ಕಲಬುರಗಿ ದಕ್ಷಿಣ ಭಾಗದ ಕಣದಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಲಾಗಿದೆ. ಇದರ ಪರಿಣಾಮವಾಗಿ ಇಟಗಾ ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ರಾಜ್ಯ ಉಪಾಧ್ಯಕ್ಷ ಹಣಮಂತ ಎಸ್.ಎಚ್., ‘ಗುಣಮಟ್ಟ ಮತ್ತು ಮಾದರಿ ಶಾಲೆಗಳ ಹೆಸರಿನಲ್ಲಿ ಉಚಿತ ಹಾಗೂ ಸಾರ್ವತ್ರಿಕ ಶಿಕ್ಷಣದ ಮೂಲ ಆಶಯವನ್ನೇ ನಾಶಪಡಿಸಲಾಗುತ್ತಿದೆ. 6–7 ಕಿಲೋಮೀಟರ್ ದೂರದ ಶಾಲೆಗೆ ಹೋಗಲು ಸಾಧ್ಯವಾಗದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಕಾರ್ಪೊರೇಟ್ ಹಿತಾಸಕ್ತಿಗಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

ಇದೇ ವೇಳೆ ಎಐಡಿಎಸ್‌ಒ ಜಿಲ್ಲಾ ಕೌನ್ಸಿಲ್ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿ, ‘ಅಭಿವೃದ್ಧಿಪಡಿಸಬೇಕಾದ ಗ್ರಾಮೀಣ ಹಾಗೂ ತಾಂಡಾ ಶಾಲೆಗಳನ್ನು ಮುಚ್ಚುತ್ತಿರುವುದು ಸರ್ಕಾರದ ಶಿಕ್ಷಣ ವಿರೋಧಿ ನೀತಿಯನ್ನು ತೋರಿಸುತ್ತದೆ. ಇದು ಬಡ ರೈತರು ಹಾಗೂ ಕಾರ್ಮಿಕರ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳುವ ಕ್ರಮವಾಗಿದೆ,’ ಎಂದರು.
ಇದನ್ನು ಓದಿದ್ದೀರಾ? ಕಲಬುರಗಿ | ಲಂಚ ಪಡೆಯುತ್ತಿದ್ದ ವಿಶೇಷ ಸಾರ್ವಜನಿಕ ಅಭಿಯೋಜಕ ಲೋಕಾಯುಕ್ತ ಬಲೆಗೆ
ಸರ್ಕಾರ ಕೂಡಲೇ ಒಂದೂ ಸರ್ಕಾರಿ ಶಾಲೆ ಮುಚ್ಚದಂತೆ ಲಿಖಿತ ಆದೇಶ ಹೊರಡಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷೆ ಪ್ರೀತಿ ದೋಡ್ಡಮನಿ, ಸದಸ್ಯರಾದ ಬಾಬು ಪವರ್, ಯುವರಾಜ ರಾಠೋಡ್, ಸಂಪತ್ ಕುಮಾರ್ ಸೇರಿದಂತೆ ನೂರಾರು ಗ್ರಾಮಸ್ಥರು ಮತ್ತು ಪೋಷಕರು ಭಾಗವಹಿಸಿದ್ದರು.





