ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಎಸೆಸೆಲ್ಸಿ ಸಾರ್ವಜನಿಕ ಪರೀಕ್ಷೆಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಂತ ಹಾಗೂ ಅನುಕೂಲಕರ ಅಧ್ಯಯನ ವಾತಾವರಣ ಕಲ್ಪಿಸಲು ಯಡ್ರಾಮಿ ತಾಲೂಕು ಪಂಚಾಯತ್ ಮಹತ್ವದ ಆದೇಶ ಹೊರಡಿಸಿದೆ.
ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೊಬೈಲ್ ಫೋನ್, ಟಿವಿ ಹಾಗೂ ಅನಾವಶ್ಯಕ ಧ್ವನಿವರ್ಧಕ ಉಪಕರಣಗಳನ್ನು ನಿಷೇಧಿಸುವಂತೆ ಸೂಚಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಯವರ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳ ಓದಿಗೆ ಅಡ್ಡಿಯಾಗುತ್ತಿರುವ ಅಂಶಗಳನ್ನು ಕಡಿಮೆ ಮಾಡುವುದೇ ಮುಖ್ಯ ಉದ್ದೇಶವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಡಂಗುರ ಸಾರುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಹಾಗೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ದೇಶಿಸಲಾಗಿದೆ.
ಮೊಬೈಲ್ ಬಳಕೆ, ಟಿವಿ ವೀಕ್ಷಣೆ ಹಾಗೂ ಜೋರಾದ ಸಂಗೀತದಿಂದ ವಿದ್ಯಾರ್ಥಿಗಳ ಗಮನ ಬೇರೆಡೆ ಹರಿಯುತ್ತಿದೆ ಎಂಬ ದೂರುಗಳು ಬಂದಿವೆ. ವಿದ್ಯಾರ್ಥಿಗಳು ಮನಸ್ಸು ಒಗ್ಗೂಡಿಸಿ ಓದಲು ಶಾಂತ ವಾತಾವರಣ ಅಗತ್ಯ, ಎಂಬುವುದನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರ ಮನಗಂಡು ಇಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದು ಗ್ರಾಮಸ್ಥರು ಶ್ಲಾಘಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಸಂಜೆ ವೇಳೆಯಲ್ಲಿ ಟಿವಿ ಧಾರಾವಾಹಿಗಳು, ಮೊಬೈಲ್ ಆಟಗಳು ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಿರುವ ಹಿನ್ನೆಲೆ ಮಕ್ಕಳ ಓದಿನ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯವನ್ನು ಪೋಷಕರು ಹಾಗೂ ಶಿಕ್ಷಕರು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಅವಧಿಯಲ್ಲಾದರೂ ಎರಡು ಗಂಟೆಗಳ ಕಾಲ ನಿಯಂತ್ರಣ ಹೇರಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಪರೀಕ್ಷಾ ಅವಧಿ ಮುಗಿಯುವವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾರ್ವಜನಿಕರು ಸಹಕರಿಸುವಂತೆ ತಾಲೂಕು ಪಂಚಾಯಿತಿ ಮನವಿ ಮಾಡಿದೆ.





