ಮದುವೆಯಾದ ಕೇವಲ ಎರಡು ತಿಂಗಳಲ್ಲೇ ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.
ಮೃತಳನ್ನು ಅನುಸೂಯಾ ಅವಿನಾಶ್ ಆಕಡೆ (26) ಎಂದು ಗುರುತಿಸಲಾಗಿದೆ. ಮೂಲತಃ ಹಳ್ಳಿಯವರಾದ ಅನುಸೂಯಾ ತಮ್ಮ ಅತ್ತೆ ಮಗನಾದ ಅವಿನಾಶ್ ಅವರನ್ನು ಪ್ರೀತಿಸುತ್ತಿದ್ದು, ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆಯೊಂದಿಗೆ ಎರಡು ತಿಂಗಳ ಹಿಂದೆ ಸಕಲ ಸಂಪ್ರದಾಯಗಳೊಂದಿಗೆ ವಿವಾಹ ಮಾಡಿಕೊಂಡರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹಳ್ಳಿ ಹಾಗೂ ಸಣ್ಣ ನಗರ ಜೀವನದ ಬಗ್ಗೆ ಉಂಟಾದ ಅಸಮಾಧಾನ ಮತ್ತು ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಅನುಸೂಯಾ ಅವರಿಗೆ ಮೂವರು ಸಹೋದರಿಯರಿದ್ದು, ಅವರೆಲ್ಲರೂ ಬೆಂಗಳೂರು ಮತ್ತು ಮುಂಬೈ ಮೊದಲಾದ ಮೆಟ್ರೋ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಸಹೋದರಿಯರ ಜೀವನಶೈಲಿಯೊಂದಿಗೆ ಹೋಲಿಸಿಕೊಂಡು ತಾನು ಮಾತ್ರ ಸಣ್ಣ ನಗರದಲ್ಲಿ ಜೀವನ ನಡೆಸಬೇಕಾಗಿರುವುದರ ಬಗ್ಗೆ ಅವರು ಮನನೊಂದಿದ್ದರು ಎನ್ನಲಾಗಿದೆ.
ಕಳೆದ ಕೆಲವು ದಿನಗಳಿಂದ ಇದೇ ವಿಚಾರವಾಗಿ ಅನುಸೂಯಾ ಮಾನಸಿಕವಾಗಿ ಕುಗ್ಗಿದ್ದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಇದೇ ಹಿನ್ನೆಲೆಯಲ್ಲಿ ಸಿದ್ದೇಶ್ವರ ಕಾಲೋನಿಯ ತಮ್ಮ ನಿವಾಸದಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ತೊಗರಿಗೆ 12,500 ರೂ. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹ: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಘಟನೆ ಕುರಿತು ಮಾಹಿತಿ ಪಡೆದ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ನವವಿವಾಹದ ಸಂಭ್ರಮ ಇನ್ನೂ ತಣ್ಣಗಾಗುವ ಮೊದಲೇ ಯುವತಿ ಪ್ರಾಣ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.





