ಪ್ರಕರಣವೊಂದರ ತನಿಖೆಗೆ ಆರೋಪಿಗಳು ಸಹಕರಿಸುತ್ತಿಲ್ಲವೆಂದು ಸುಳ್ಳು ನೆಪ ಹೇಳಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ವಂಚಿಸಿದ ಪೊಲೀಸ್ ಅಧಿಕಾರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ₹1.50 ಲಕ್ಷ ದಂಡ ವಿಧಿಸಿದೆ.
ಈ ಹಿಂದೆ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಐ ಆಗಿದ್ದ ಹಾಗೂ ಪ್ರಸ್ತುತ ಡಿವೈಎಸ್ಪಿಯಾಗಿರುವ ಸೋಮಲಿಂಗ ಕಿರದಳ್ಳಿ ಅವರು ದಂಡಕ್ಕೆ ಗುರಿಯಾದ ಅಧಿಕಾರಿ. ದಂಡದ ಮೊತ್ತವನ್ನು ಪ್ರಕರಣದ ಮೂವರು ಆರೋಪಿಗಳಿಗೆ ತಲಾ ₹50 ಸಾವಿರದಂತೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಧೀಶ ಮಹಮ್ಮದ್ ಮುಜೀರ್ ಉಲ್ಲಾ ಅವರಿದ್ದ ಪೀಠ ಆದೇಶಿಸಿದೆ.
ಅಜಾದ್ಪುರ ರಸ್ತೆಯ ಅಹ್ಮದ್ ನಗರ ನಿವಾಸಿಗಳಾದ ಸಲ್ಲಾವುದ್ದೀನ್ ಶೇಖ್, ಶಬಾನಾ ಬೇಗಂ ಹಾಗೂ ಸರ್ವರ್ ಮತೀನ್ ವಿರುದ್ಧ 2024ರ ಡಿಸೆಂಬರ್ 19ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದು ತನಿಖೆಗೆ ನಿಯಮಿತವಾಗಿ ಹಾಜರಾಗುತ್ತಿದ್ದರು.
ಆದರೆ ತನಿಖಾಧಿಕಾರಿ ಸೋಮಲಿಂಗ ಕಿರದಳ್ಳಿ ಅವರು ಆರೋಪಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳಿ ಜಾಮೀನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ದಾಖಲೆಗಳನ್ನು ಸಲ್ಲಿಸಿ ಆರೋಪಿಗಳು ತನಿಖೆಗೆ ಹಾಜರಾಗಿದ್ದುದನ್ನು ಸಾಬೀತುಪಡಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಕೆಕೆಆರ್ಟಿಸಿ ಬಸ್ಗೆ ಆಕಸ್ಮಿಕ ಬೆಂಕಿ; ಪ್ರಯಾಣಿಕರು ಪ್ರಣಾಪಾಯದಿಂದ ಬಚಾವ್
ಸುಳ್ಳು ಮಾಹಿತಿ ನೀಡಿ ನ್ಯಾಯಾಲಯವನ್ನು ದಾರಿಗೆಡಿಸಿದ್ದುದು ಸಾಬೀತಾದ ಹಿನ್ನೆಲೆಯಲ್ಲಿ ಅಧಿಕಾರಿಗೆ ದಂಡ ವಿಧಿಸಲಾಗಿದೆ. ಜೊತೆಗೆ ಈ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.





