ನಗರದ ಸಾಂಚಿನಗರ ನ್ಯೂ ಘಾಟಗೆ ಲೇಔಟ್‌ನಲ್ಲಿ ನಿರ್ಮಿಸಲಾದ ಪ್ರಬುದ್ಧ ಬುದ್ಧ ವಿಹಾರ ಬಿಕ್ಕು ನಿವಾಸವನ್ನು ಭಾನುವಾರ ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಬೌದ್ಧ ಧರ್ಮದ ಶಾಂತಿ, ಜ್ಞಾನ ಹಾಗೂ ಸಮಾನತೆಯ ಮೌಲ್ಯಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳಬೇಕೆಂದು ಗಣ್ಯರು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಪ್ರಭು ಪಾಟೀಲ್ ಮಾತನಾಡಿ, ‘1956ರಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಇದೊಂದು ವೈಜ್ಞಾನಿಕ ಹಾಗೂ ಮಾನವೀಯ ಧರ್ಮವೆಂದು ದೇಶಕ್ಕೆ ತೋರಿಸಿಕೊಟ್ಟರು ಎಂದರು. ಹೆಚ್ಚು ಹೆಚ್ಚು ಬುದ್ಧ ವಿಹಾರಗಳನ್ನು ನಿರ್ಮಿಸುವ ಮೂಲಕ ಬುದ್ಧನ ಶಾಂತಿಯುತ ಮಾರ್ಗವನ್ನು ಜನರಲ್ಲಿ ಬೆಳೆಸಬೇಕಿದೆ’ ಎಂದು ಹೇಳಿದರು.

ಉದ್ಘಾಟಕರಾಗಿ ಭಾಗವಹಿಸಿದ್ದ ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಪ್ರಬುದ್ಧ ಬುದ್ಧ ವಿಹಾರ ನಿರ್ಮಿಸುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದೀರಿ’ ಎಂದು ಶ್ಲಾಘಿಸಿದರು. ಬುದ್ಧ ಎಂದರೆ ಪ್ರಬುದ್ಧತೆ, ಜ್ಞಾನ ಮತ್ತು ಬೆಳಕು. ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದೇ ಪ್ರಬುದ್ಧತೆ ಎಂದು ವಿವರಿಸಿದರು. ಕೇವಲ ಹೆಸರಿಗಷ್ಟೇ ಪ್ರಬುದ್ಧ ಬುದ್ಧ ವಿಹಾರ ನಿರ್ಮಿಸದೆ, ಬುದ್ಧನ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಬುದ್ಧನು ಮೋಕ್ಷದ ದಾರಿ ತೋರಿಸುವ ದೇವರು ಅಲ್ಲ; ಆತ ಸ್ವತಃ ಅನುಭವಿಸಿ, ಅವಲೋಕಿಸಿ, ವಿಚಾರಿಸಿ, “ಇದು ನಿನಗೆ ಸರಿ ಎನ್ನಿಸಿದರೆ ಅದೇ ನಿನ್ನ ಸರಿಯಾದ ಮಾರ್ಗ” ಎಂದು ಹೇಳಿದ ಮಹಾನ್ ಚಿಂತಕ ಎಂದು ವಿವರಿಸಿದರು. “ನಾನು ಹೇಳಿದ್ದೇ ಸರಿ” ಎಂದು ಬುದ್ಧ ಎಂದಿಗೂ ಹೇಳಿಲ್ಲ; ವಿಚಾರಶೀಲತೆಯೇ ಬುದ್ಧನ ಮಾರ್ಗ ಎಂದು ಹೇಳಿದರು.
‘1936ರಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು “ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುವುದಿಲ್ಲ” ಎಂದು ಘೋಷಿಸಿದ ವಿಚಾರವನ್ನು ಸ್ಮರಿಸಿ, ಎಲ್ಲ ಧರ್ಮಗಳನ್ನು ಆಳವಾಗಿ ಅಧ್ಯಯನ ಮಾಡಿದ ಬಳಿಕ 1956ರಲ್ಲಿ ಪ್ರಾಚೀನ ಭಾರತೀಯ ಹಾಗೂ ವೈಜ್ಞಾನಿಕ ಧರ್ಮವಾಗಿರುವ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.ಅಂಬೇಡ್ಕರ್ ಅವರ ಚಿಂತನೆಗಳು, ಲೇಖನಗಳು ಮತ್ತು ಆಲೋಚನೆಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.
‘ಮಹಿಳೆಯರು ಹಾಗೂ ಯುವಕರು ಡಾ. ಅಂಬೇಡ್ಕರ್ ಅವರ ತತ್ವ, ಸಿದ್ಧಾಂತ, ಬರಹಗಳನ್ನು ಓದಿ ಅರ್ಥೈಸಿಕೊಂಡು ಜಾಗೃತರಾಗಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜ ವಿಭಜನೆಯಾದರೆ ದೇಶದ ಹಾಗೂ ಸಮಾಜದ ಭವಿಷ್ಯಕ್ಕೆ ಅಪಾಯ ಉಂಟಾಗುತ್ತದೆ ಎಂದು ಹೇಳಿದರು. ಯುವಕರನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ’ ಎಂದು ಕರೆ ನೀಡಿದರು.
‘ಸರ್ಕಾರದ ವತಿಯಿಂದ ಪ್ರಬುದ್ಧ ವಿಹಾರಗಳು, ಅನುಭವ ಮಂಟಪಗಳು ಹಾಗೂ ಪ್ರಗತಿಪರ ಚಿಂತನಾ ಕೇಂದ್ರಗಳನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಜ್ಞಾನಾನಂದ ಮಹಾಬೋಧಿ ವಿಹಾರ, ಬೆಂಗಳೂರು ರವರು ಮಾತನಾಡಿ, ‘ಈ ಭೂಮಿಯ ಎಲ್ಲೆಡೆ ಬುದ್ಧನ ಅವಶೇಷಗಳು ಮತ್ತು ಗುರುತುಗಳು ಕಂಡುಬರುತ್ತವೆ ಎಂದರು. “ಬುದ್ಧ ಮತ್ತು ಅವನ ದಮ್ಮ” ಗ್ರಂಥ ಓದಿದರೆ ತ್ರಿಪಿಟಕ ಓದಿದಂತೆ ಎಂದು ಅಭಿಪ್ರಾಯಪಟ್ಟರು. ಬುದ್ಧ ಧರ್ಮವಲ್ಲ, ಮನುಷ್ಯತ್ವದ ಪ್ರತೀಕ; ಅವರ ತತ್ವಗಳು ಬಹುಜನರ ಹಿತ ಮತ್ತು ಒಳಿತನ್ನು ಪ್ರತಿಪಾದಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣ ಹೋರಾಟವನ್ನು ಸ್ಮರಿಸಲಾಯಿತು. ಡಾ. ಅಂಬೇಡ್ಕರ್ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಲಾಯಿತು. ಮಕ್ಕಳನ್ನು ಬೌದ್ಧ ಬಿಕ್ಕು ಸಂಘದ ಸದಸ್ಯರನ್ನಾಗಿ ಮಾಡಿ ಧರ್ಮದ ಬೆಳವಣಿಗೆಗೆ ಕೈಜೋಡಿಸುವಂತೆ’ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಡಾ. ಅನಿಲ್ ಕುಮಾರ್ ಟೆಂಗಳಿ ಮಾತನಾಡಿ ಗಣ್ಯರನ್ನು ಸ್ವಾಗತಿಸಿದರು. ಡಾ. ಶ್ರೀಕಾಂತ ಚಿಮ್ಮ ನಿರೂಪಿಸಿದರು.
ವೇದಿಕೆಯಲ್ಲಿ ಭಂತೆ ಧಮ್ಮನಾಗ, ಭಂತೆ ರೇವತ, ಭಂತೆ ಜ್ಞಾನ ಸಾಗರ, ವರ್ಷಾ ರಾಜೀವ ಜಾನೆ, ಸತೀಶ ಕಣಮೇಶ್ವರ, ಹಣಮಂತ ಇಟಗಿ, ಮಜರ್ ಆಲಂ ಖಾನ್, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ಉಪಸ್ಥಿತರಿದ್ದರು. ಬೌದ್ಧ ಅನುಯಾಯಿಗಳು, ಉಪಸಕರು ಹಾಗೂ ಉಪಾಸಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.





