ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿಯಾಗಿರುವ ಆರ್.ಡಿ. ಪಾಟೀಲ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲು ಸಿಬ್ಬಂದಿಯೊಂದಿಗೆ ಮತ್ತೆ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಶನಿವಾರ ಜೈಲು ಸಿಬ್ಬಂದಿ ಬ್ಯಾರೆಕ್ ತಪಾಸಣೆ ನಡೆಸುತ್ತಿದ್ದ ವೇಳೆ, ಆರ್.ಡಿ. ಪಾಟೀಲ ಅವರು ತಪಾಸಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ನನ್ನ ಬ್ಯಾರೆಕ್ ತಪಾಸಣೆಗೆ ಅನುಮತಿ ಇದೆಯೇ? ಎಂದು ಪ್ರಶ್ನಿಸಿದ ಅವರು, ಅನುಮತಿ ಇಲ್ಲದೆ ತಪಾಸಣೆ ನಡೆಸಲು ಬಿಡುವುದಿಲ್ಲ ಎಂದು ಜೈಲು ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಅಪಘಾತದ ಸ್ಥಳದಲ್ಲೇ ರಸ್ತೆ ತಡೆದು ದಿಢೀರ್ ಪ್ರತಿಭಟನೆ; 50ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲು
ಈ ಘಟನೆ ಸಂಬಂಧ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್. ಅನಿತಾ ಅವರು ಫರಹತಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗುವ ವೇಳೆ ಕೂಡ ಆರ್ ಡಿ ಪಾಟೀಲ್ ಅವರು ಜೈಲು ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ಹಾಗೂ ನೂಕಾಟ, ತಳ್ಳಾಟ ನಡೆದಿದ್ದು, ಜೈಲು ಅಧಿಕಾರಿಗಳು ಹಾಗೂ ಆರ್ ಡಿ ಪಾಟೀಲ್ ಪರಸ್ಪರವಾಗಿ ದೂರು ದಾಖಲಿಸಿದ್ದರು. ಈ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.





