15 ವರ್ಷದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದ ಅಪರಾಧಿಗೆ ಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು (ಪೋಕ್ಸೊ ವಿಶೇಷ ನ್ಯಾಯಾಲಯ) 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.50 ಲಕ್ಷ ರೂ. ದಂಡ ವಿಧಿಸಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರ ಟ್ರ್ಯಾಕ್ಟರ್ ಚಾಲಕ ರಿಯಾಜ್ ಬಾಗವಾನ (23) ಶಿಕ್ಷೆಗೆ ಒಳಗಾದ ಅಪರಾಧಿ.
2025ರ ಜನವರಿ ತಿಂಗಳಲ್ಲಿ ಅಪರಾಧಿ ಬಾಗವಾನ, ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಘಟನೆ ಬೆಳಕಿಗೆ ಬಂದ ಬಳಿಕ, ಸಂತ್ರಸ್ತೆಯ ಪೋಷಕರು ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಸಿ.ಜಿ ಅವರು, ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದ್ದಾರೆ. ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ 20 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ, ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ 3 ವರ್ಷ ಜೈಲು ಮತ್ತು 25 ಸಾವಿರ ರೂ. ದಂಡ ಹಾಗೂ ಬಿಎನ್‌ಎಸ್ ಕಾಯ್ದೆಯಡಿ 2 ವರ್ಷ ಜೈಲು ಮತ್ತು 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯವು ಸರ್ಕಾರಕ್ಕೆ ಆದೇಶಿಸಿದೆ.




