ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಈಗ ಮಹಾತ್ಮ ಗಾಂಧಿಯವರ ಹೆಸರಿನ ಕಾಯ್ದೆ ಬದಲಾವಣೆ ಮಾಡಿ ವಿಬಿ-ಜಿರಾಮ್‌ಜಿ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿಯವರನ್ನು ಎರಡನೇ ಬಾರಿ ಕೊಲೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಸೋಮವಾರ ಅಂತರರಾಷ್ಟ್ರೀಯ ಮಟ್ಟದ ಜಿಟಿಟಿಸಿ ಕೇಂದ್ರ ಸ್ಥಾಪನೆ ಸೇರಿದಂತೆ ₹680 ಕೋಟಿಗಳ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ʼವಿಬಿ-ಜಿರಾಮ್‌ಜಿ ಯೋಜನೆಯಡಿ ಕೇಂದ್ರ ಸರ್ಕಾರ ಶೇ 60ರಷ್ಟು ಅನುದಾನ, ರಾಜ್ಯಗಳು ಶೇ 40ರಷ್ಟು ಅನುದಾನ ನೀಡಬೇಕು. ಇದನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಕಾನೂನಿನ ಸಮರಕ್ಕೆ ಮುಂದಾಗಿದೆ. ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆ ಮಾಡಲಾಗುವುದು. ಈ ಕಾಯ್ದೆಯಲ್ಲಿ ಇರುವುದು ದಶರಥ ಪುತ್ರ ರಾಮನೂ ಅಲ್ಲ, ಕೌಸಲ್ಯಾ ರಾಮನೂ ಅಲ್ಲ. ನಾಥೂರಾಮ. ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದು ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲʼ ಎಂದರು.
ʼಜೇವರ್ಗಿ ಮತ್ತು ಸೇಡಂನಲ್ಲಿ ₹1,595 ಕೋಟಿಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಸೇಡಂ ಕ್ಷೇತ್ರದಲ್ಲಿ ₹579.68 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೀಡಿ, ₹108.35 ಕೋಟಿಗಳ ಕಾಮಗಾರಿಗಳನ್ನು ಉದ್ಘಾಟಿಸಲಾಗಿದೆ. ಸೇಡಂನಲ್ಲಿ ₹73 ಕೋಟಿಗಳ ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆಯಾಗುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ನೂರಕ್ಕೆ ನೂರರಷ್ಟು ಕೆಲಸ ದೊರಕುತ್ತದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ 4 ಜಿಟಿಟಿಸಿ ಸ್ಥಾಪಿಸಿದ್ದರೆ, ಎರಡೂವರೆ ವರ್ಷಗಳಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ 10 ಜಿಟಿಟಿಸಿ ಪ್ರಾರಂಭ ಮಾಡಿದ್ದೇವೆʼ ಎಂದು ಹೇಳಿದರು.
ʼಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಂ ಸಿಂಗ್ ಅವರು ಇಲ್ಲದೇ ಹೋಗಿದ್ದರೆ 371ಜೆ ಜಾರಿಯಾಗುತ್ತಿರಲಿಲ್ಲ. 371 ಜೆ ಕಾಯ್ದೆಯಿಂದಾಗಿ ಈ ಭಾಗದಲ್ಲಿ 10 ಸಾವಿರ ವೈದ್ಯರು, 30 ಸಾವಿರ ಇಂಜಿನಿಯರ್, 12 ಸಾವಿರ ಜನ ದಂತ ವೈದ್ಯರು ಹಾಗೂ ಇನ್ನಿತರೆ ಉನ್ನತ ಶಿಕ್ಷಣ ಪಡೆದಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಶೇ 70ರಷ್ಟು ಮೀಸಲಾತಿ ನೀಡಲಾಯಿತು. ಇವೆಲ್ಲವೂ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ. ಇದರಿಂದ 85 ಸಾವಿರ ಜನರಿಗೆ ಸರ್ಕಾರಿ ನೌಕರಿ ದೊರಕಲು ಸಾಧ್ಯವಾಯಿತು. ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಕೂಡ ಮಾಡಲಾಗಿದೆʼ ಎಂದರು.

ʼಪ್ರಧಾನಮಂತ್ರಿ ಸೇರಿದಂತೆ ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಲ್ಲಿ ₹1.12 ಸಾವಿರ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ವೆಚ್ಚ ಮಾಡಲಾಗಿದೆ. ಖಜಾನೆಯಲ್ಲಿ ಹಣವಿಲ್ಲದಿದ್ದರೆ ₹680 ಕೋಟಿ ರೂ.ಗಳ ಯೋಜನೆಗೆ ಚಾಲನೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಸೇಡಂನಲ್ಲಿ ಕಾಚೂರ ಏತ ನೀರಾವರಿಗೆ ₹85.50 ಲಕ್ಷ, ಬೀರನಹಳ್ಳಿ ₹90 ಕೋಟಿ, ಯಡಹಳ್ಳಿ ಏತ ನೀರಾವರಿ ಯೋಜನೆಗೆ ₹67.30 ಕೋಟಿ, ತರನಹಳ್ಳಿ ಯೋಜನೆಗೆ ₹82.90 ಕೋಟಿ ಒದಗಿಸಲಾಗಿದೆ. ಇದರಿಂದ 8,000 ಹೆಕ್ಟೇರ್ ಗೆ ನೀರಾವರಿ ಸೌಲಭ್ಯ ದೊರಕಲಿದೆ. ಇದರಿಂದ ತೊಗರಿ, ಕಬ್ಬು ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯಬಹುದಾಗಿದೆ. ಅಂತರ್ಜಲ ಮಟ್ಟವನ್ನು ಇದರಿಂದ ಹೆಚ್ಚು ಮಾಡಬಹುದಾಗಿದೆ. ಕುಡಿಯುವ ನೀರಿಗೆ ಸಹ ಉಪಯೋಗವಾಗಲಿದೆʼ ಎಂದು ಹೇಳಿದರು.
ʼಎಲ್ಲಾ ಜಿಲ್ಲೆಗಳೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಈ ವರ್ಷ ಪ್ರಾರಂಭಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿ ಆಗಿರುವುದರಿಂದ ಸರ್ಕಾರ ಬಡವರಿಗೆ ಅನುಕೂಲ ಕಲ್ಪಿಸಲು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಎಲ್ಲರನ್ನೂ ಒಳಗೊಂಡಿರುವ ಸರ್ಕಾರ. ಎಲ್ಲರ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿ ಎಂದು ನಂಬಿ, ಅದರಂತೆ ನಡೆಯುತ್ತಿದ್ದೇವೆʼ ಎಂದರು.
₹498 ಕೋಟಿ ಬೆಳೆ ಹಾನಿ ಪರಿಹಾರ :
ಈ ಬಾರಿ ಮಳೆ ಹೆಚ್ಚಾಗಿ ಬೆಳೆ ಹಾನಿಯಾಗಿರುವುದರಿಂದ ವೈಮಾನಿಕ ಸಮೀಕ್ಷೆ ಕೈಗೊಂಡು ಪರಿಶೀಲಿಸಿ ಪರಿಹಾರ ಕೊಡಲು ನಿರ್ಧರಿಸಿ ಎಸ್‌ಡಿಆರ್‌ಎಫ್ ನಿಂದ ₹1,218 ಕೋಟಿ ಜೊತೆಗೆ ಸರ್ಕಾರದ ವತಿಯಿಂದ ಒಟ್ಟು ₹1,031ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗಿದೆ. ರಾಜ್ಯದಲ್ಲಿ ಒಟ್ಟು 14.21 ಲಕ್ಷ ರೈತರ ಬೆಳೆ ಹಾನಿಯಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ 7,21,786 ರೈತರ ಬೆಳೆ ಹಾನಿಗೊಳಗಾಗಿದೆ. ₹1,072 ಕೋಟಿ ಬೆಳೆ ಹಾನಿಗೆ ಪರಿಹಾರ ನೀಡಲಾಗಿದೆ ಎಂದರು.
ಇದನ್ನೂ ಓದಿ : ಬೀದರ್ | ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯ ಸ್ಥಿರ : ಈಶ್ವರ ಖಂಡ್ರೆ
ʼಕಲಬುರಗಿ ಜಿಲ್ಲೆಯಲ್ಲಿ 3,23,318 ರೈತರ ಬೆಳೆ ಹಾನಿಯಾಗಿದ್ದು, ₹498 ಕೋಟಿ ಪರಿಹಾರ ನೀಡಲಾಗಿದೆ. ರೈತರ ಖಾತೆಗಳಿಗೆ ಈ ಹಣವನ್ನು ತಲುಪಿಸುವ ಕೆಲಸ ಮಾಡಿದ್ದೇವೆ. ರೈತರ ಸಹಾಯಕ್ಕೆ ಸರ್ಕಾರ ಸದಾ ಮುಂದಾಗಿದೆ. ನೆಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಗೆ ₹233 ಕೋಟಿ ಪರಿಹಾರ ಒದಗಿಸಲಾಗಿದೆ. ಕಬ್ಬಿನ ಬೆಲೆ ಕಡಿಮೆ ಎಂದು ರೈತರು ಪ್ರತಿಭಟಿಸಿದಾಗ ಅವರ ನೆರವಿಗೆ ಸರ್ಕಾರ ಧಾವಿಸಿ ಸರ್ಕಾರದಿಂದ ₹50 ಹಾಗೂ ಕಾರ್ಖಾನೆಯಿಂದ ₹50 ನಿಗದಿ ಮಾಡಿ ₹300 ಕೋಟಿಗಳನ್ನು ಸರ್ಕಾರದಿಂದ ಕಬ್ಬಿನ ಬೆಳೆಗಾರರಿಗೆ ನೀಡಲಾಗಿದೆʼ ಎಂದು ಹೇಳಿದರು.





