ಒಳ ಮೀಸಲಾತಿಯಲ್ಲಿ ರೋಸ್ಟರ್ ಬಿಂದುವಿನ ಆಧಾರದ ಮೇಲೆ ಬಲಗೈ ಸಮುದಾಯದ ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ‘ಒಳ ಮೀಸಲಾತಿ ಬಲಗೈ ಹೋರಾಟ ಸಮಿತಿ, ಕಲಬುರಗಿ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ರಸ್ತೆ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ದಸಂಸ ಹಿರಿಯ ಮುಖಂಡ ಅರ್ಜುನ ಭದ್ರೆ ಮಾತನಾಡಿ, ‘ರಾಜ್ಯ ಸರ್ಕಾರವು ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಿರುವ ಅನುಸೂಚಿತ ಜಾತಿಗಳ ವಿಧೇಯಕ–2025 ಅನ್ನು ರಾಜ್ಯಪಾಲರು ತಿರಸ್ಕರಿಸಬೇಕು. ಒಳ ಮೀಸಲಾತಿ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಹಲವು ಗೊಂದಲಗಳು ಮತ್ತು ಅಸ್ಪಷ್ಟತೆಗಳಿವೆ. ರೋಸ್ಟರ್ ಬಿಂದುವಿನ ಅನ್ವಯಿಕೆಯಲ್ಲಿ ತಾರತಮ್ಯ ಉಂಟಾಗಿದ್ದು, ಇದರಿಂದ ಕೆಲ ಜಾತಿಗಳಿಗೆ ಅವಕಾಶಗಳು ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ,’ ಎಂದು ಆರೋಪಿಸಿದರು.

‘ಒಳ ಮೀಸಲಾತಿ ಕುರಿತ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾದ ಸಮಸ್ಯೆಗಳು ಹಾಗೂ ಅಸಮಾನತೆಗಳು ಸಂಪೂರ್ಣವಾಗಿ ಬಗೆಹರಿಯುವ ತನಕ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ಕ್ರಮಗಳಿಗೆ ತಾತ್ಕಾಲಿಕ ತಡೆ ನೀಡಬೇಕು. ಇಲ್ಲವಾದಲ್ಲಿ ಬಲಗೈ ಸಮುದಾಯದ ವಿದ್ಯಾರ್ಥಿಗಳು ಮತ್ತು ಉದ್ಯೋಗಾರ್ಥಿಗಳು ಹಾನಿಗೊಳಗಾಗುವ ಸಾಧ್ಯತೆ ಇದೆ,’ ಎಂದು ಎಚ್ಚರಿಸಿದರು.
ಹಾಗೆಯೇ, ‘ಹೊಸ ಜಾತಿ ಪ್ರಮಾಣಪತ್ರಗಳ ವಿತರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಹಳೆಯ ಜಾತಿ ಪ್ರಮಾಣಪತ್ರಗಳನ್ನೇ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಹೊಸ ಪ್ರಮಾಣಪತ್ರಗಳ ಜಾರಿಯಿಂದ ಅನೇಕ ಕುಟುಂಬಗಳು ತೊಂದರೆಗೆ ಒಳಗಾಗುತ್ತಿವೆ’ ಎಂದು ಹೇಳಿದರು.

‘ಒಳ ಮೀಸಲಾತಿಗೆ ಅನ್ವಯಿಸಿರುವ ರೋಸ್ಟರ್ ಬಿಂದುವನ್ನು ಮರುಪರಿಶೀಲಿಸಿ ಪರಿಷ್ಕರಿಸಬೇಕು. ಸಮಿತಿಯಲ್ಲಿನ ಗೊಂದಲಗಳು ಹಾಗೂ ಅಸಮಾಧಾನಗಳಿಗೆ ಶೀಘ್ರ ಪರಿಹಾರ ಕಂಡುಹಿಡಿಯಬೇಕು. ಅಂತಿಮ ನಿರ್ಧಾರವಾಗುವ ತನಕ ಹಳೆಯ ಮೀಸಲಾತಿ ನಿಯಮಗಳ ಆಧಾರದಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಆಗ್ರಹಿಸಿದರು.
ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಹೋರಾಟವನ್ನು ಹಂತ ಹಂತವಾಗಿ ತೀವ್ರಗೊಳಿಸುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡುವುದರ ಮೂಲಕ ಮನವಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಕೋಮುವಾದಿ, ಜಾತಿವಾದಿ ಶಕ್ತಿಗಳನ್ನು ತಡೆಯಲು ಐಕ್ಯ ಹೋರಾಟ ಅಗತ್ಯ; ಮಲ್ಲಿಕಾರ್ಜುನ ಸತ್ಯಂಪೇಟೆ
ಪ್ರತಿಭಟನೆಯಲ್ಲಿ ಎಬಿ ಹೊಸಮನಿ, ಮಹಾದೇವ ಮೋಘಾ, ದೇವೇಂದ್ರ ಸಿನ್ನೂರು, ಅಮೃತ ಸಾಗರ್, ಹಣಮಂತ ಬೋಧನಕರ್, ಸಿದ್ದರಾಮ ಪ್ಯಾಟೆ, ಮಲ್ಲಪ್ಪ ಹೊಸಮನಿ, ಸಂಪತಕುಮಾರ ವಳಕೇರಿ, ವಿಶಾಲ ದರ್ಗಿ, ಎಸ್.ಎಸ್. ತಾವಡೆ, ದಿಗಂಬರ ಬೆಳಮಗಿ, ಜೈಭೀಮ್, ಮಲ್ಲಿಕಾರ್ಜುನ್ ಮದಾನಿ, ಸಂತೋಷ್ ಮೇಲಿನಮನಿ, ದೇವಪ್ಪ, ಅರ್ಜುನ್ ಎನ್ ಕೆ, ಧರ್ಮಣ್ಣ ಕೋಣೆಕರ, ಹಣಮಂತರಾವ್ ದೊಡ್ಡಮನಿ, ದಿನೇಶ ದೊಡ್ಡಮನಿ, ಮಜುನಾಥ ಬಂಡಾರಿ, ಅನಿಲ್ ಟೆಂಗಳಿ, ಹಣಮಂತ ಇಟಗಿ, ಸೇರಿದಂತೆ ಹಲವು ಮುಖಂಡರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.





