ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ವತಿಯಿಂದ ಆಯೋಜಿಸಲಾದ 2025–26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತರಾಫೈಲ್‌ನಲ್ಲಿ ಶನಿವಾರ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಚಾರ್ಯರಾದ ರಾಘವೇಂದ್ರ ಪಿ ಆರ್ ಮಾತನಾಡಿ, ‘ಎನ್‌ಎಸ್‌ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸ್ವಚ್ಛತೆ, ಭದ್ರತೆ ಹಾಗೂ ತಾಳ್ಮೆ ಸೇರಿದಂತೆ ಹಲವು ಮೌಲ್ಯಗಳನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿವೆ ಎಂದು ಹೇಳಿದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ, ನಾಯಕತ್ವ ಗುಣಗಳ ಅಭಿವೃದ್ಧಿ ಹಾಗೂ ಸಮಾಜಮುಖಿ ಸೇವಾ ಮನೋಭಾವ ರೂಪಿಸುವಲ್ಲಿ ಇಂತಹ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದರು.

‘ಪರಿಸರ ಸಂರಕ್ಷಣೆಯ ಮಹತ್ವವನ್ನು ಯುವಪೀಳಿಗೆಗೆ ತಿಳಿಸುವುದು, ಸಮಾಜ ಸೇವೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಶೇಷ ಶಿಬಿರಗಳು ಸಹಾಯಕವಾಗುತ್ತವೆ ಎಂದರು. ಸಮಾಜದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಅರಿವು ಹೊಂದಿ, ಅವುಗಳ ಪರಿಹಾರಕ್ಕೆ ಕೈಜೋಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಮಾರೋಪ ಸಮಾರಂಭದ ಅಂಗವಾಗಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಬಿರದ ಅವಧಿಯಲ್ಲಿ ಯುವಜನರ ಆರೋಗ್ಯ ಸಮಾಲೋಚನೆ, ಸಾಮಾಜಿಕ ಜವಾಬ್ದಾರಿಗಳ ಅರಿವು, ಸಸಿ ನೆಡುವುದು ಮತ್ತು ಪೋಷಣೆ, ಮತದಾನದ ಮಹತ್ವ, ಡಿಜಿಟಲ್ ಶಿಕ್ಷಣ ಹಾಗೂ ಸೈಬರ್ ಅಪರಾಧ ಕುರಿತು ಜಾಗೃತಿ, ನಾಗರಿಕರ ಪತ್ರಕರ್ತರ ತರಬೇತಿ, ಶಿಬಿರಾರ್ಥಿಗಳ ಮಾನಸಿಕ ಆರೋಗ್ಯ, ಸಂವಹನ ಕೌಶಲ್ಯ ಹಾಗೂ ಸೇವಾ ಮನೋಭಾವ ಬೆಳೆಸುವ ಕುರಿತು ವಿವಿಧ ಉಪನ್ಯಾಸಗಳು ಮತ್ತು ಕಾರ್ಯಾಗಾರಗಳನ್ನು ನಡೆಸಲಾಯಿತು.

ಇದರ ಜೊತೆಗೆ ಸ್ವಚ್ಛತಾ ಅಭಿಯಾನ, ಪರಿಸರ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಮಾಜ ಸೇವಾ ಚಟುವಟಿಕೆಗಳನ್ನು ಸಹ ಶಿಬಿರದ ಅಂಗವಾಗಿ ಆಯೋಜಿಸಲಾಯಿತು. ಆರು ದಿನಗಳ ಕಾಲ ನಡೆದ ಈ ಶಿಬಿರದ ಅನುಭವಗಳನ್ನು ಶಿಬಿರಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಹಂಚಿಕೊಂಡರು.

ಇದನ್ನು ಓದಿದ್ದೀರಾ? ಕಲಬುರಗಿ | ಕೇಂದ್ರೀಯ ವಿವಿಯಲ್ಲಿ ಅಕ್ರಮ ನೇಮಕಾತಿ ಆರೋಪ: ನ್ಯಾಯಾಂಗ ತನಿಖೆಗೆ ಕೆವಿಎಸ್ ಆಗ್ರಹ
ಈ ಸಂದರ್ಭದಲ್ಲಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಕುಲಸಚಿವರಾದ ಶರಣಬಸಪ್ಪ ಹಾಲ್ವಿ, ಕಾಲೇಜಿನ ಹಿರಿಯ ಎನ್‌ಎಸ್‌ಎಸ್ ಅಧಿಕಾರಿ ಹಾಗೂ ಶ್ರೇಣಿ ಉಪನ್ಯಾಸಕಿ ಆರೀಫಾ ಖಾತೂನ್, ಈದಿನ.ಕಾಮ್ ಜಿಲ್ಲಾ ವರದಿಗಾರರಾದ ಗೀತಾ ಹೊಸಮನಿ, ದೇವರಾಜ್ ಕನ್ನಡಿಗ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.





