ರಾಜ್ಯ ಸರ್ಕಾರವು ಮಂಡಿಸಿರುವ 2026–27ನೇ ಸಾಲಿನ ಬಜೆಟ್ ಕಲ್ಯಾಣ ಯೋಜನೆಗಳನ್ನು ಮುಂದುವರಿಸುತ್ತಲೇ ಮೂಲಸೌಕರ್ಯ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಿರುವ ಮಹತ್ವದ ಬಜೆಟ್ ಆಗಿದೆ ಎಂದು ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಕಲಬುರಗಿಯ ಡಾ. ಸಿದ್ದಾರ್ಥ್ ಮದನಕರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಸುಮಾರು ₹4.48 ಲಕ್ಷ ಕೋಟಿ ಮೊತ್ತದ ಈ ಬಜೆಟ್ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿದ್ದು, “11ಜಿ ಮಾದರಿ”ಯ ಮೂಲಕ ಗ್ರಾಮೀಣ ಕೃಷಿಯಿಂದ ಜಾಗತಿಕ ವ್ಯಾಪಾರ, ಹಸಿರು ಇಂಧನ ಮತ್ತು ನಗರೀಕರಣದವರೆಗೆ ಬಹುಮುಖಿ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡಿದೆ’ ಎಂದು ಹೇಳಿದ್ದಾರೆ.
‘ಕಲ್ಯಾಣ ಯೋಜನೆಗಳಿಗೆ ಸರ್ಕಾರ ಮುಂದುವರಿದ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ. ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ಮತ್ತು ಶಕ್ತಿ ಯೋಜನೆಗೆ ₹5,300 ಕೋಟಿ ಮೀಸಲಿಡಲಾಗಿದ್ದು, ಮಹಿಳಾ ಸಬಲೀಕರಣಕ್ಕೆ ಈ ಯೋಜನೆಗಳು ನೆರವಾಗಲಿವೆ ಎಂದು ಅವರು ತಿಳಿಸಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಸುಗ್ಗಿ ನಂತರದ ನಿರ್ವಹಣೆಗೆ ಒತ್ತು ನೀಡುವ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ, ಸಿರಿಧಾನ್ಯಗಳ ಪ್ರೋತ್ಸಾಹ, ರೈತರಿಗೆ ಸುಲಭ ಸಾಲ, ಬೆಳೆ ವಿಮೆ ಮತ್ತು ಉಚಿತ ವಿದ್ಯುತ್ ಯೋಜನೆಗಳ ಮೂಲಕ ಕೃಷಿ ಕ್ಷೇತ್ರವನ್ನು ಬಲಪಡಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಮೆಟ್ರೋ ವಿಸ್ತರಣೆ, ಸುರಂಗ ಮಾರ್ಗಗಳು ಹಾಗೂ ವೈಟ್ ಟಾಪಿಂಗ್ ರಸ್ತೆಗಳಿಗೆ ಆದ್ಯತೆ ನೀಡಲಾಗಿದೆ. ಜೊತೆಗೆ ಧಾರವಾಡ ಕೈಗಾರಿಕಾ ನೋಡ್ ಹಾಗೂ ಮೈಸೂರು ಎರಡನೇ ಐಟಿ ಸಿಟಿ ಅಭಿವೃದ್ಧಿಯಂತಹ ಯೋಜನೆಗಳ ಮೂಲಕ ರಾಜ್ಯದ ಇತರೆ ನಗರಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರೊ. ಗೋವಿಂದರಾವ್ ಸಮಿತಿ ವರದಿ ಅನುಷ್ಠಾನಕ್ಕೆ ₹4,291 ಕೋಟಿ ಮೀಸಲಿಡಲಾಗಿದ್ದು, ಇದರಿಂದ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಸಹಕಾರಿಯಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದ್ದಾರೆ.
‘ಆದರೆ ಜಿಎಸ್ಟಿ ದರ ತರ್ಕಬದ್ಧಗೊಳಿಸುವಿಕೆಯಿಂದ ರಾಜ್ಯಕ್ಕೆ ಸುಮಾರು ₹10,000 ಕೋಟಿ ನಷ್ಟವಾಗಿರುವುದು ಹಾಗೂ ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ತಾರತಮ್ಯವಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ರೈತನ ಹೊಲದಲ್ಲಿ ಆಕಸ್ಮಿಕ ಬೆಂಕಿ: ಸ್ಪಿಂಕ್ಲರ್ ಪೈಪ್‌ಗಳು ಬೆಂಕಿಗಾಹುತಿ
‘2026–27ನೇ ಸಾಲಿನ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಆದರೆ ಕಲಬುರಗಿ ಜಿಲ್ಲೆಗೆ ನೇರವಾಗಿ ಯಾವುದೇ ದೊಡ್ಡ ಘೋಷಣೆಗಳಿಲ್ಲ. ಆದರೂ ರಾಜ್ಯಮಟ್ಟದ ವಿವಿಧ ಯೋಜನೆಗಳ ಲಾಭ ಜಿಲ್ಲೆಗೆ ಸಿಗುವ ಸಾಧ್ಯತೆಯಿದೆ ಎಂದು ಅವರು ಪ್ರಕಟಣೆಯಲ್ಲಿ’ ತಿಳಿಸಿದ್ದಾರೆ.





