ಸರಕಾರದಿಂದ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಬಿಡುಗಡೆಯಾಗಿದ್ದ ₹4.42 ಲಕ್ಷ ರೂ. ಹಣವನ್ನು ದುರ್ಬಳಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸರಕಾರಿ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದ ನವೀನಾಥ ಶಿಂಧೆ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ. ಅವರು ಸಹ ಶಿಕ್ಷಕರಾಗಿದ್ದು, 2024ರ ಏಪ್ರಿಲ್‌ನಿಂದ 2025ರ ಸೆಪ್ಟೆಂಬರ್‌ವರೆಗೆ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಅವಧಿಯಲ್ಲಿ ಸರಕಾರಿ ಅನುದಾನದ ಹಣ ದುರ್ಬಳಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಜಕುಮಾರ್ ಪಾಟೀಲ್ ಹಾಗೂ ಬಸಪ್ಪ ಬಿರಾದಾರ ನೇತೃತ್ವದಲ್ಲಿ ಇಬ್ಬರು ಶಿಕ್ಷಕರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸಲಾಗಿತ್ತು. ತನಿಖಾ ವರದಿಯಲ್ಲಿ, ನವೀನಾಥ ಶಿಂಧೆ ಅವರ ಅವಧಿಯಲ್ಲಿ ಒಟ್ಟು ₹4.42 ಲಕ್ಷ ರೂ. ಹಣವನ್ನು ನಿಯಮಬಾಹಿರವಾಗಿ ಬಳಸಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಎರಡು ಬೈಕ್‌ಗಳ ಡಿಕ್ಕಿ: ಓರ್ವ ಸಾವರ ಸ್ಥಳದಲ್ಲೇ ಮೃತ ಇನ್ನೋರ್ವ ಗಂಭೀರ ಗಾಯ
ತನಿಖಾ ವರದಿ ಆಧರಿಸಿ, ಕರ್ತವ್ಯ ಲೋಪದ ಆರೋಪದಡಿ ನವೀನಾಥ ಶಿಂಧೆಯನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ಅಧಿಕೃತ ಆದೇಶ ಪ್ರಕಟಿಸಿದ್ದಾರೆ.
ಗಮನಾರ್ಹವಾಗಿ, ಅಮಾನತುಗೊಂಡ ನವೀನಾಥ ಶಿಂಧೆ ಅವರು ಸದ್ಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಬುರಗಿ ದಕ್ಷಿಣ ವಲಯದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.





