ಟ್ರ್ಯಾಕ್ಟರ್ ಚಲಿಸುವಾಗ ರೀಲ್ಸ್ ಮಾಡುತ್ತಿದ್ದ ಚಾಲಕನೊಬ್ಬ ಅದೇ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಕಮಲಾಪುರ ತಾಲೂಕಿನ ಮಹಾಗಾಂವದಲ್ಲಿ ನಡೆದಿದೆ.
ಮಹಾಗಾಂವ ಗ್ರಾಮದ ನಿವಾಸಿ ಲೋಕೇಶ ಕಲ್ಲಪ್ಪ ಪೂಜಾರಿ (22) ಮೃತ ಚಾಲಕ ಎಂದು ತಿಳಿದು ಬಂದಿದೆ.
ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಬುಧವಾರ ಟ್ರ್ಯಾಕ್ಟರ್‌ನಿಂದ ನೇಗಿಲು ಹೊಡೆಯುತ್ತಿರುವ ಸಮಯದಲ್ಲಿ ಒಂದು ಕೈಯಲ್ಲಿ ಮೊಬೈಲ್ ಹಿಡಿದು ರೀಲ್ಸ್ ಮಾಡುತ್ತಾ, ಇನ್ನೊಂದು ಕೈಯಲ್ಲಿ ಸ್ಟೇರಿಂಗ್ ಹಿಡಿದಿದ್ದರು. ಈ ವೇಳೆ ಆಯತಪ್ಪಿ ಕಾಲು ಜಾರಿ ಟ್ರ್ಯಾಕ್ಟರ್ ಗಾಲಿ ಕೆಳಗೆ ಬಿದ್ದಿದ್ದು, ದೇಹದ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದಾಗ ಹೊಲದಲ್ಲಿ ಯಾರು ಇರಲಿಲ್ಲ. ಟ್ರ್ಯಾಕ್ಟರ್ ಚಕ್ರ ಹಾಗೇ ತಿರುಗಿದ ಪರಿಣಾಮ ಲೋಕೇಶ ದೇಹದ ಅರ್ಧ ಭಾಗ ನಜ್ಜುಗುಜ್ಜಾಗಿದೆ. ಇದನ್ನು ಗಮನಿಸಿದ ರೈತರೊಬ್ಬರು ಬಳಿ ಹೋಗಿ ನೋಡಿದಾಗ, ಲೋಕೇಶ ಟ್ರ್ಯಾಕ್ಟರ್ ಗಾಲಿ ಕೆಳಗೆ ಸಿಕ್ಕಿಕೊಂಡು ಸ್ಥಳದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ.
ಇದನ್ನೂ ಓದಿ : ಕಲಬುರಗಿ | ತೊಗರಿಗೆ ₹12,500 ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ
ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಶಿವಶಂಕರ ಸಾಹು, ಪಿಎಸ್ಐ ಬಸವರಾಜ ಚಿತ್ತಕೋಟೆ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.





