ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹವು ಇತ್ತೀಚೆಗೆ ಅಕ್ರಮಗಳ ಅಡ್ಡೆಯಾಗಿ ಪರಿಣಮಿಸಿರುವುದಕ್ಕೆ ಮತ್ತೊಂದು ಸಾಕ್ಷಿ ಹೊರಬಿದ್ದಿದೆ. ಜೈಲಿನೊಳಗೆ ಕೈದಿಗಳು ಜೂಜಾಟ, ಮದ್ಯಪಾನ ಹಾಗೂ ಸಿಗರೇಟ್ ಸೇವನೆ ನಡೆಸುತ್ತಿರುವುದಾಗಿ ಹೇಳಲಾಗಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೆಲವು ತಿಂಗಳುಗಳ ಹಿಂದೆಯೇ ಕೈದಿಗಳ ಹೈಫೈ ಜೀವನದ ದೃಶ್ಯಗಳು, ಜೈಲಾಧಿಕಾರಿಯ ವಿರುದ್ಧ ಪತ್ರ ಬರೆದಿರುವುದು ಸೇರಿದಂತೆ ಹಲವು ಅಕ್ರಮಗಳ ಕುರಿತ ವೀಡಿಯೋಗಳು ಹರಿದಾಡಿದ್ದವು. ಇದರ ನಡುವೆಯೇ ಮಂಗಳವಾರ ಪಿಎಸ್‌ಐ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಅವರು ಜಿಲ್ಲಾಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಬುಧವಾರ ಬೆಳಗ್ಗೆ ಜೈಲಿನೊಳಗಿನ ಜೂಜಾಟ ಮತ್ತು ಮದ್ಯಪಾನದ ದೃಶ್ಯಗಳು ಬಹಿರಂಗಗೊಂಡಿವೆ.
ಇದನ್ನು ಓದಿದ್ದೀರಾ? ಯಾದಗಿರಿ | ಸರ್ಕಾರಿ ಶಾಲೆಯ ಬಿಸಿ ಊಟದಲ್ಲಿ ಹಲ್ಲಿ ಪತ್ತೆ; ಪೋಷಕರಲ್ಲಿ ಆತಂಕ
ಇದರಿಂದ ಕಲಬುರಗಿ ಕೇಂದ್ರ ಕಾರಾಗೃಹವು ಅಕ್ರಮಗಳು ಬಯಲಾಗುವ ಪರಪ್ಪನ ಅಗ್ರಹಾರ ಜೈಲಿಗಿಂತಲೂ ಮೀರಿದ ಕೇಂದ್ರವಾಗುತ್ತಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಜೈಲಿನೊಳಗೆ ನಿರಂತರವಾಗಿ ಅಕ್ರಮಗಳು ನಡೆಯುತ್ತಿದ್ದರೂ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ.





