ಜೇವರ್ಗಿ ತಾಲೂಕಿನ ಸೋನ್ನ ಗ್ರಾಮದಲ್ಲಿರುವ ಗ್ರಾಮ ಒನ್ ಕೇಂದ್ರದಲ್ಲಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸಂಬಂಧಿಸಿದ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಜೇವರ್ಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜೇವರ್ಗಿ ತಾಲೂಕು ಸಂಚಾಲಕ ಶಿವಕುಮಾರ ಹೆಗ್ಡೆ ಮಾತನಾಡಿ, ‘ಸೋನ್ನ ಗ್ರಾಮದ ಗ್ರಾಮ ಒನ್ ಕೇಂದ್ರದ ನಿರ್ವಾಹಕ ಪ್ರವೀಣ ತಂದೆ ಶಿವರಾಯ ಶಿರಸಗಿ ಸಾರ್ವಜನಿಕರಿಂದ ನಿಯಮಬಾಹಿರವಾಗಿ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಮುಂದುವರೆದು ಅವರು ‘ಎಫ್‌ಐಡಿ ಮಾಡಲು ರೂ.100, ಕಿಸಾನ್ ಕಪಾಸ್ ಯೋಜನೆಯಡಿ ಹತ್ತಿ ಬೆಳೆ ನೋಂದಣಿಗೆ ಒಬ್ಬ ರೈತನಿಂದ ರೂ.800 ರಿಂದ 1000 ವರೆಗೆ ಹಣ ಪಡೆಯಲಾಗುತ್ತಿದೆ. ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗೆ ಅರ್ಜಿ ಸಲ್ಲಿಸಲು ರೂ.100 ರಿಂದ 200 ವಸೂಲಿ ಮಾಡಲಾಗುತ್ತಿದ್ದು, ಒಟ್ಟಾರೆ ರೂ.1200 ಆಗುತ್ತಿದೆ’ ಎಂದು ದೂರಲಾಗಿದೆ.
‘ಸರ್ಕಾರ ನಿಗದಿಪಡಿಸಿದ ದರಪಟ್ಟಿ ಕೇಳಿದರೆ, ‘ಈ ಹಣದಲ್ಲಿ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಜೇವರ್ಗಿ ತಹಶೀಲ್ದಾರರಿಗೆ ಹಣ ನೀಡಬೇಕು” ಎಂದು ಮೌಖಿಕವಾಗಿ ಹೇಳುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಪಡಿತರ ಚೀಟಿಗೆ ಹೆಸರು ಸೇರಿಸಲು ರೂ.3500 ಹಾಗೂ ಹೆಸರು ತೆಗೆದುಹಾಕಲು ರೂ.2500 ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ’ ಎಂದು ಹೇಳಿದರು.
ಈ ಕುರಿತು ಗ್ರಾಮ ಲೆಕ್ಕಾಧಿಕಾರಿಗಳಿಗೆ 2-3 ಬಾರಿ ದೂರವಾಣಿ ಮೂಲಕ ಮಾಹಿತಿ ನೀಡಿದರೂ ಯಾವುದೇ ಪರಿಶೀಲನೆ ನಡೆಯದಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಜೂಜಾಟದ ವೀಡಿಯೋ ವೈರಲ್!
ಗ್ರಾಮದ ಬಡ ರೈತರು ಹಾಗೂ ಅನಕ್ಷರಸ್ಥರಿಗೆ ತೀವ್ರ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಮ ಒನ್ ನಿರ್ವಾಹಕನ ವಿರುದ್ಧ ತಕ್ಷಣ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಬಸಪ್ಪ ಹೆಗಡೆ, ಶ್ರವಣಕುಮಾರ ಮಾರಡಗಿ, ಮಲ್ಲಿಕಾರ್ಜುನ ಸರನಾಳ, ಅರುಣಕುಮಾರ ಮಾರಡಗಿ, ಶರಣಪ್ಪ ಹೆಗಡೆ, ಶರಣಬಸು ತಳವಾರ, ಸಂಗಪ್ಪ ಧರೇನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.





