ದೆವ್ವ ಹಿಡಿದಿದೆ ಎಂದು ಮಹಿಳೆಗೆ ಬಡಿಗೆಯಿಂದ ಹೊಡೆದ ಪರಿಣಾಮ ನೆರೆಯ ಮಹಾರಾಷ್ಟ್ರದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಮುಕ್ತಾಬಾಯಿ (26) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಆಳಂದ ಪಟ್ಟಣದ ಮುಕ್ತಾಬಾಯಿ ಅವರನ್ನು 6 ವರ್ಷಗಳ ಹಿಂದೆ ಮಹಾರಾಷ್ಟ್ರದ ಮುರುಮ್ ಗ್ರಾಮದ ಗಿಡ್ಡೆಪ್ಪ ಎಂಬುವವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಐದು ವರ್ಷದ ಮಗನಿದ್ದಾನೆ. ಕೆಲವು ದಿನಗಳಿಂದ ಮುಕ್ತಾಬಾಯಿಗೆ ದೆವ್ವ ಹಿಡಿದಿದೆ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು.
ಬೇವಿನ ಕಟ್ಟಿಗೆಯಿಂದ ಹೊಡೆದರೆ ದೆವ್ವ ಬಿಡುತ್ತದೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದರು ಎಂದು ಮುಕ್ತಾಬಾಯಿ ತವರುಮನೆಯವರು ಆರೋಪಿಸಿದ್ದರು. ಮುಕ್ತಾಬಾಯಿ ಕೆಲವು ದಿನಗಳ ಹಿಂದೆ ಮನೆಯಲ್ಲಿ ಕುಸಿದು ಬಿದ್ದಾಗ ದೆವ್ವ ಹಿಡಿದಿದೆ ಎಂದುಕೊಂಡ ಸಂಬಂಧಿಕರು ಬೇವಿನ ಕಟ್ಟಿಗೆಗಳಿಂದ ಮನಬಂದಂತೆ ಹೊಡೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಕಲಬುರಗಿ | ಅಪರಿಚಿತ ವಾಹನ ಡಿಕ್ಕಿ ; ಬೈಕ್ ಸವಾರ ಸ್ಥಳದಲ್ಲೇ ಸಾವು, ಸಹಸವಾರ ಗಂಭೀರ
ನಂತರ ಮಹಿಳೆಯನ್ನು ಡಿ.21ರಂದು ಗಾಣಗಾಪುರದ ಸಂಗಮ ನದಿಯಲ್ಲಿ ಸ್ನಾನ ಮಾಡಿಸಿ ದತ್ತಾತ್ರೇಯ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ. ಅಲ್ಲಿಂದ ಗುರುಮಠಕಲ್ ಕಡೆಗೆ ಮತ್ತೊಂದು ಪೂಜೆಗಾಗಿ ಕರೆದೊಯ್ಯುತ್ತಿದ್ದ ವೇಳೆ ಅಸ್ವಸ್ಥರಾಗಿದ್ದಾರೆ. ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಹಿಳೆ ಬದುಕುಳಿಯಲಿಲ್ಲ ಎಂದು ತಿಳಿದುಬಂದಿದೆ.





