ಸೇಡಂ ತಾಲೂಕಿನ ಅನವರ್ ಗ್ರಾಮ ಪಂಚಾಯಿತಿಗೆ ಒಳಪಡುವ ಐಪಿ ಹೊಸಳ್ಳಿ ಗ್ರಾಮದಲ್ಲಿ ರೇಷನ್(ಪಡಿತರ) ಡೀಲರ್ ಅವರು ಹೇಳಿದಂತೆಯೇ ಕೇಳಬೇಕು. ಇಲ್ಲವೇ ರೇಷನ್ ಕೊಡುವುದಿಲ್ಲವೆಂದು ಡೀಲರ್ ಮಜ್ಜಿದ್ ಪಟೇಲ್ ದಾಸ್ತಪುರ ಅವರು ಪ್ರತ್ಯಕ್ಷವಾಗಿಯೇ ಖಡಕ್ಕಾಗಿ ಧಮ್ಕಿ ಹಾಕುತ್ತಿರುವುದಾಗಿ ಆರೋಪ ವ್ಯಕ್ತವಾಗಿದೆ.
ಈ ಕುರಿತು ಐಪಿ ಹೊಸಳ್ಳಿ ಗ್ರಾಮಸ್ಥರು ಪ್ರಶ್ನಿಸಿದಾಗ ರೇಷನ್ ಸಲುವಾಗಿ ಥಂಬ್ ಮಾಡಿಕೊಳ್ಳಬೇಕೆಂದರೆ 20 ರೂಪಾಯಿ ಮತ್ತು ರೇಷನ್ ಕೊಡುವಾಗ 20 ರೂಪಾಯಿ ಹಾಗೂ ಒಂದು ಕೆಜಿ ಅಕ್ಕಿ ನೀಡಬೇಕು. ಇಲ್ಲದಿದ್ದಲ್ಲಿ ರೇಷನ್ ಕೊಡುವುದಿಲ್ಲವೆಂದು ಗ್ರಾಮಸ್ಥರಿಗೆ ಕಂಡೀಷನ್ ಹಾಕಿದ್ದಾರೆ.
ಸರ್ಕಾರವು ಸಾರ್ವಜನಿಕರಿಗೆ ಉಪಯೋಗವಾಗಬೇಕು ಎನ್ನುವ ಉದ್ದೇಶದಿಂದ ಅನ್ನಭಾಗ್ಯ ಸೇವೆಯನ್ನು ಜಾರಿಮಾಡಿದೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆಹಾರ ತಲುಪಬೇಕು ಎಂಬ ದೃಷ್ಟಿಯಿಂದ ಸರಕಾರ ಉಚಿತ ಅಕ್ಕಿ ಮತ್ತು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿದೆ. ಆದರೆ ಐಪಿ ಹೊಸಳ್ಳಿ ಗ್ರಾಮದಲ್ಲಿ ಡೀಲರ್ ಮಜ್ಜಿದ್ ಪಟೇಲ್ ಅವರು ತನ್ನದೇ ಆದ ನಿಯಮಗಳನ್ನು ಸೃಷ್ಟಿಸಿ ಸಾರ್ವಜನಿಕರಲ್ಲಿ ಹಣ ಮತ್ತು ಅಕ್ಕಿ ಪಡೆದು ರೇಷನ್ ನೀಡುತ್ತಿರುವುದು ಖಂಡನೀಯ. ಇಂತಹ ಅನ್ಯಾಯ ಸುಮಾರು ವರ್ಷಗಳಿಂದ ನಡೆಯುತ್ತಿದೆ ಎಂಬುದು ಗ್ರಾಮಸ್ಥರ ಆಕ್ರೋಶವಾಗಿದೆ.
ಇದನ್ನೂ ಓದಿದ್ದೀರಾ? ಗ್ಯಾರಂಟಿ vs ಸರ್ಕಾರಿ ಉದ್ಯೋಗ: ಹುಸಿ ಕಥನಕ್ಕೆ ಬಲಿಯಾಗುತ್ತಿದ್ದಾರೆಯೇ ಉದ್ಯೋಗಕಾಂಕ್ಷಿಗಳು?
ಈ ರೀತಿ ಜನರನ್ನು ಮೋಸಮಾಡಿ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಮಾಡುತ್ತಿರುವ ಡೀಲರ್ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಆತನ ಡೀಲರ್ ಶಿಪ್ ಪರವಾನಿಗೆ ರದ್ದುಪಡಿಸಬೇಕು ಎಂದು ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ.





