ವಿಬಿ-ಜಿ ರಾಮ್ ಜಿ ಕಾಯ್ದೆ ಗ್ರಾಮೀಣರ ಹಕ್ಕುಗಳನ್ನು ಕಸಿಯುವ, ಅವರ ಬದುಕಿನ ಮೇಲೆ ಪ್ರಹಾರ ನಡೆಸುವ ಕ್ರೂರ ಯೋಜನೆಯಾಗಿದೆ. ಗ್ರಾಮಗಳ ಉಳಿವಿಗಾಗಿ, ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಮನರೇಗಾವನ್ನು ಮರುಸ್ಥಾಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ʼಮನರೇಗಾದಲ್ಲಿ 365 ದಿನ ನಾವು ಕೆಲಸ ಕೇಳಬಹುದಾಗಿತ್ತು. ಆದರೆ, ವಿಬಿ-ಜಿ ರಾಮ್ ಜಿ ಕಾಯ್ದೆಯಡಿ 60 ದಿನ ಉದ್ಯೋಗವನ್ನು ನಿಷೇಧಿಸಲಾಗಿದೆ. ಇದು ಕಾರ್ಮಿಕರ ಹಕ್ಕು ಹೇಗಾಗುತ್ತದೆ? ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ʼವಾಸ್ತವವಾಗಿ ವಿಬಿ-ಜಿ ರಾಮ್ ಜಿ ಕಾಯ್ದೆಯು ಕಾರ್ಮಿಕರು ತಮ್ಮ ಇಚ್ಛೆಯಂತೆ ಕೆಲಸ ಮಾಡುವ ಹಕ್ಕನ್ನು ಕಳೆದುಕೊಂಡು, ಹಣವಂತರ ಜಮೀನಿನಲ್ಲಿ ಕಡಿಮೆ ಸಂಬಳಕ್ಕೆ ದುಡಿಯುವಂತಹ ಅನಿವಾರ್ಯತೆ ಸೃಷ್ಟಿಸುವ ಹುನ್ನಾರ. ಇದರಿಂದ ಉದ್ಯೋಗವಿಲ್ಲದ ಕಾರ್ಮಿಕ, ಶ್ರೀಮಂತರು ನಿಗದಿಪಡಿಸಿದ ಕಡಿಮೆ ಮೊತ್ತಕ್ಕೆ ದುಡಿಯಬೇಕಾದ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾನೆ. ಈ ಯೋಜನೆ ಮೂಲಕ ಜೀತಪದ್ಧತಿಯನ್ನು ಮರುಸ್ಥಾಪಿಸಲಾಗುತ್ತಿದೆʼ ಎಂದು ಆಕ್ರೋಶ ಹೊರಹಾಕಿದ್ದಾರೆ.
ʼವಿಬಿ-ಜಿ ರಾಮ್ ಜಿ’ ಕಾಯ್ದೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತರುವಂತಹ ಯೋಜನೆಯಾಗಿದೆ. ಪಂಚಾಯತಿ ಅಧಿಕಾರವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ಸಂಚಾಗಿದೆ. ಬೇಡಿಕೆ ಆಧಾರದ ಯೋಜನೆಯನ್ನು ಈಗ ಆರ್ಥಿಕ ಚೌಕಟ್ಟಿನ ಯೋಜನೆಯನ್ನಾಗಿ ಮಾಡುತ್ತಿದ್ದಾರೆ. ಉದ್ಯೋಗದ ಹಕ್ಕನ್ನು ಕಸಿದುಕೊಂಡು, ಕಾರ್ಮಿಕರನ್ನು ಗುಲಾಮರಾಗಿ ಮಾಡುವುದಕ್ಕೆ ಹೊರಟಿದ್ದಾರೆ. ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರು, ಬಾಧಿತರನ್ನು ಅವಕಾಶವಂಚಿತರನ್ನಾಗಿ ಮಾಡುವುದಾಗಿದೆ. ಕಾಯ್ದೆಯು ಒಕ್ಕೂಟದ ವ್ಯವಸ್ಥೆಯ ವಿರುದ್ಧ ಅಷ್ಟೇ ಅಲ್ಲ, ಸಂವಿಧಾನಕ್ಕೂ ವಿರುದ್ಧವಾಗಿದೆ. ಈ ಕಾಯ್ದೆಯು ರಾಜ್ಯ ಸರ್ಕಾರದ ಹಣಕಾಸಿನ ಮೇಲೆ ಹೆಚ್ಚಿನ ಹೊರೆ ಉಂಟುಮಾಡಲಿದೆʼ ಎಂದರು.
ʼಜನೋಪಯೋಗಿ ಯೋಜನೆ ಮನರೇಗಾ ಮತ್ತು ಗ್ರಾಮೀಣ ಜನರ ಹಕ್ಕನ್ನು ಕಿತ್ತುಕೊಂಡು, ಅವರ ಮೇಲೆ ವಿಬಿ ಗ್ರಾಮ್ ಜಿ ಎಂಬ ಮಾರಕ ಕಾಯ್ದೆಯನ್ನು ಹೇರಲು ಹೊರಟಿರುವ ಕೇಂದ್ರ ಸರ್ಕಾರದ ನಡೆ ಅಕ್ಷಮ್ಯ. ಬಿಜೆಪಿ ಸರ್ಕಾರದ್ದು ಗೇಮ್ ಚೇಂಜಿಂಗ್ ಸ್ಕೀಮ್ ಒಂದೂ ಇಲ್ಲ, ನೇಮ್ ಚೇಂಜಿಂಗ್ ಸ್ಕೀಮ್ ಅಷ್ಟೇ. ಅವರದು ಮೂರು ‘ಆರ್’ಗಳ ನೀತಿಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳ ರೀನೇಮಿಂಗ್, ರೀಪ್ಯಾಕೇಜಿಂಗ್ ಮತ್ತು ರೀಲಾಂಚಿಂಗ್ ಮಾಡುವುದಕ್ಕೆ ಸೀಮಿತವಾಗಿದ್ದಾರೆʼ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಮೊಬೈಲ್ ಮೃತ್ಯು ಮೋಡಿಯಿಂದ ಮಕ್ಕಳನ್ನು ರಕ್ಷಿಸುವವರಾರು?
ʼಮನರೇಗಾ ಯೋಜನೆಯಿಂದ ಗಾಂಧೀಜಿ ಅವರ ಹೆಸರನ್ನು ಕಿತ್ತು ಹಾಕಿರುವುದಕ್ಕಾಗಿ ನಾವು ಹೋರಾಟ ಮಾಡುತ್ತಿರುವುದಲ್ಲ. ಅವರು ನಾಥೂರಾಮ್ ಗೋಡ್ಸೆ ಯೋಜನೆ ಎಂದೇ ಹೆಸರು ಇಟ್ಟುಕೊಳ್ಳಲಿ. ಆದರೆ ನಮ್ಮ ಜನರಿಗೆ ಬೇಕಿರುವುದು ಉದ್ಯೋಗ, ಊಟ ಮತ್ತು ಘನತೆಯಿಂದ ಬದುಕುವ ಹಕ್ಕು. ಅದನ್ನು ಮರಳಿ ನೀಡಲಿ. ಅದಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆʼ ಎಂದು ತಿಳಿಸಿದ್ದಾರೆ.





