ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನ್ಯಾಯ ದೊರಕಿಸಬೇಕೆಂಬ ಉದ್ದೇಶದಿಂದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಅ.6 ರಿಂದ ಕಲ್ಯಾಣ ಕರ್ನಾಟಕ ನ್ಯಾಯಪೂರ್ಣ ಅಭಿವೃದ್ಧಿಗಾಗಿ ಜಾಥಾ ಹಮ್ಮಿಕೊಂಡು ಅ.13ರಂದು ಸೋಮವಾರ ತೊಗರಿಯ ಕಣಜ ಕಲಬುರಗಿಯಲ್ಲಿ ಅಂತ್ಯಗೊಳ್ಳಲಿದೆ ಎಂದು ವೆಲಫೆರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ನ್ಯಾಯವಾದಿ ತಹೆರ್ ಹುಸೇನ್ ತಿಳಿಸಿದರು.
ಬೀದರ್ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ʼಹೆಸರಿಗೆ ಮಾತ್ರ ಕಲ್ಯಾಣ ಕರ್ನಾಟಕ. ಆದರೆ ಎಲ್ಲಿ ಕಲ್ಯಾಣ ಆಗುತ್ತಿದೆ. ಬರೀ ಬೊಗಳೆ ಭಾಷಣ ಹಾಗೂ ಘೋಷಣೆಗೆ ಸೀಮಿತವಾಗಿದೆ. ಈ ಭಾಗಕ್ಕೆ ಕಲಂ 371 (ಜೆ) ಅಡಿ ವಿಶೇಷ ಸ್ಥಾನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. 2019 ರಲ್ಲಿ ಹೈದ್ರಾಬಾದ್ ಕರ್ನಾಟಕದ ಹೆಸರು ಬದಲಾಯಿಸಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಯಿತು. ಆದರೆ, ಕಲ್ಯಾಣ ಕರ್ನಾಟಕ ಯಾವ ರೀತಿಯಲ್ಲಿಯೂ ಅಭಿವೃದ್ಧಿ ಕಂಡಿಲ್ಲʼ ಎಂದರು.
ʼಈ ಭಾಗದ ಕಾರ್ಮಿಕರು, ನಿರುದ್ಯೋಗಿ ಯುವ ಸಮೂಹ ಕೆಲಸ ಅರಸಿ ಅನ್ಯ ನಗರಗಳಿಗ ವಲಸೆ ಹೋಗುವುದು ತಪ್ಪಲಿಲ್ಲ. ಯುವಕರಿಗೆ ಅರ್ಹತೆಗೆ ಅನುಗುಣವಾಗಿ ಉದ್ಯೋಗ ಸಿಗುತ್ತಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಿಲ್ಲ, ಅಪೌಷ್ಟಿಕತೆಯಿಂದ ಮಕ್ಕಳ, ಬಾಣಂತಿಯರ ಸಾವಿನ ಸರಣಿ ನಿಲ್ಲಲಿಲ್ಲ, ರೈತರ ಆತ್ಮಹತ್ಯೆ ಮುಂದುವರೆದಿದೆ. ಹಿಂದುಳಿದ, ಅಲ್ಪಸಂಖ್ಯಾತ, ದಲಿತ, ಅದಿವಾಸಿಗಳಿಗೆ ಸಾಮಾಜಿಕ ನ್ಯಾಯ ದೊರಕಲಿಲ್ಲʼ ಎಂದು ಹೇಳಿದರು.
ʼಬೆಂಗಳೂರು ವಿಭಾಗದಲ್ಲಿ ತಲಾ ಆದಾಯ 5.01 ಇದೆ. ನಮ್ಮ ಭಾಗದ ತಲಾ ಆದಾಯ 1.73 ಇದೆ. ಮೈಸೂರು ಭಾಗದಲ್ಲಿ 10 ಹಿಂದುಳಿದ ತಾಲೂಕುಗಳಿದ್ದರೆ, ನಮ್ಮ ಭಾಗದಲ್ಲಿ 29 ಹಿಂದುಳಿದ ತಾಲೂಕುಗಳಿವೆ. ರಾಜ್ಯದಲ್ಲಿ ಅತಿ ಬಡ ಜಿಲ್ಲೆಗಳಲ್ಲಿ ಅತ್ಯಂತ ಬಡ ಜಿಲ್ಲೆಗಳು ಯಾದಗಿರಿ, ರಾಯಚೂರು, ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಗಳಾಗಿವೆ. ರಾಜ್ಯದಲ್ಲಿ ಸಣ್ಣ, ಮಧ್ಯಮ ಕೈಗಾರಿಕೆಗಳ ಒಟ್ಟು ಸಂಖ್ಯೆ 17.48 ಲಕ್ಷ ಇದ್ದು, ಈ ಪೈಕಿ ಕಲ್ಯಾಣ ಕರ್ನಾಟಕ ಭಾಗ ಪಾಲು ಕೇವಲ 1.96 ಲಕ್ಷ ಅಂದರೆ ಕೇವಲ 114 ಮಾತ್ರ. ಕಾರ್ಮಿಕರು ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ವಲಸೆ ಹೋಗುವುದು ನಮ್ಮ ಭಾಗದವರಾಗಿದ್ದಾರೆʼ ಎಂದು ವಿವರಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿ ವರ್ಷ ಸರಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮುಗಿಸುತ್ತಾರೆ. ಆದರೆ, ಕೆಲಸಕ್ಕೆ ಮಾತ್ರ ಬೇರೆ ಕಡೆ ವಲಸೆ ಹೋಗುತ್ತಾರೆ. ಸುಮಾರು 30 ಲಕ್ಷ ಜನ ರಕ್ತಹೀನತೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 9,000 ಶಿಶುಗಳು ಮತ್ತು 600 ತಾಯಂದಿರು ಪೋಷಕಾಂಶಗಳ ಕೊರತೆಯಿಂದ ಮೃತಪಟ್ಟಿದ್ದಾರೆʼ ಎಂದು ತಿಳಿಸಿದರು.
ಜನ ಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಿಲ್ಲ. 1,963 ಉಪ ಕೇಂದ್ರಗಳ ಅವಶ್ಯಕತೆ ಇದ್ದು, ಕೇವಲ 1,519 ಕೇಂದ್ರಗಳಿವೆ.100 ಸಮುದಾಯ ಆರೋಗ್ಯ ಕೇಂದ್ರಗಳ ಅವಶ್ಯಕತೆ ಇದ್ದು, ಕೇವಲ 58 ಕೇಂದ್ರಗಳಿವೆ. ಅದೇ ರೀತಿ 400 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವಶ್ಯಕತೆ ಇದ್ದು, 352 ಕೇಂದ್ರಗಳಿವೆ. ಒಟ್ಟಾರೆ ಸುಮಾರು 80 ಸಾವಿರ ಸರಕಾರಿ ಹುದ್ದೆ ಗಳು ಖಾಲಿಯಿದ್ದು, ಇದರಲ್ಲಿ ಸುಮಾರು 22 ಸಾವಿರ ಶಿಕ್ಷಕರ ಹುದ್ದೆಗಳು ಇಂದಿಗೂ ಭರ್ತಿಯಾಗಿಲ್ಲ. ಅದರ ಪರಿಣಾಮ ಪ್ರತಿ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ನಮ್ಮ ಭಾಗದ ಜಿಲ್ಲೆಗಳು ಕೊನೆ ಸ್ಥಾನದಲ್ಲಿವೆʼ ಎಂದು ಕಳವಳ ವ್ಯಕ್ತಪಡಿಸಿದರು.
ಇಡೀ ರಾಜ್ಯದಲ್ಲಿ ಅತಿಹೆಚ್ಚು ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರು ಈ ಜಿಲ್ಲೆಗಳಲ್ಲಿ ಇದ್ದಾರೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಗಳು ಇಲ್ಲ. ಸಂಪನ್ಮೂಲಗಳಿಗೆ ಏನೇ ಕೊರತೆ ಇಲ್ಲ. ಚಿನ್ನ ಉತ್ಪಾದನೆಯ ಹಟ್ಟಿ ಗಣಿ, ಅದಿರಿನ ಖಜಾನೆ ಇರುವ ಬಳ್ಳಾರಿ ಮತ್ತು ವಿಜಯನಗರ, ಸಿಮೆಂಟ್ ಕಣಜ ಕಲ್ಬುರ್ಗಿ, ಹತ್ತಿ ಭತ್ತ ಬೆಳೆಯುವ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು, ಅಭಿವೃದ್ಧಿ ಯೋಜನೆಗಳು ಸರಿಯಾಗಿ ಅನುಷ್ಠಾನಕ್ಕೆ ಬಂದಿದ್ದರೆ ಕಲ್ಯಾಣ ಕರ್ನಾಟಕ ಭೂಮಿಯ ಮೇಲಿನ ಸ್ವರ್ಗವಾಗಬಹುದಿತ್ತು. ಆದರೆ ರಾಜಕಾರಣಿಗಳ ನಿರ್ಲಕ್ಷ್ಯ ಮತ್ತು ಇಚ್ಛಾ ಶಕ್ತಿಯ ಕೊರತೆಯಿಂದ ಇಂದು ನಮ್ಮ ಸ್ಥಿತಿ ಹೀಗಿದೆ. ಈ ಎಲ್ಲ ಸಮಸ್ಯೆಗಳ ಕಡೆ ಸರಕಾರದ ಗಮನ ಸೆಳೆದು ಈ ಭಾಗದ ನ್ಯಾಯ ಪೂರ್ಣ ಅಭಿವೃದ್ಧಿಗಾಗಿ ಒತ್ತಾಯಿಸಿ ನಮ್ಮ ಈ ಜಾಥಾ ಹೊರಟಿದೆ ಎಂದವರು ತಿಳಿಸಿದರು.
ಮಾನವ ಅಭಿವೃದ್ಧಿ ಸೂಚ್ಯಂಕ, ತಲಾ ಆದಾಯ ಹೆಚ್ಚಳ, ವಿವಿಧ ಯೋಜನೆಯಡಿ ಅನುದಾನ ಸಮರ್ಪಕ ಬಳಕೆ, ಉದ್ಯೋಗ ಅವಕಾಶಗಳನ್ನು ಹೆಚ್ಚಳ, ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ, ಖಾಲಿ ಹುದ್ದೆಗಳ ಭರ್ತಿ, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಕೈಗಾರಿಕಾ ನೀತಿ, ನೀರಾವರಿ ಯೋಜನೆ ಪ್ರಾರಂಭ, ಶಿಕ್ಷಣದ ಗುಣಮಟ್ಟ, ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಕೆಆರ್‌ಡಿಬಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡು ಮನವಿ ಪತ್ರ ಸಲ್ಲಿಸಲಾಗುವುದುʼ ಎಂದು ತಾಹೆರ್ ಹುಸೇನ್ ತಿಳಿಸಿದರು.
ಇದನ್ನೂ ಓದಿ : ಬೀದರ್ | ʼಶಾಹೀನ್ʼ ಸಂಸ್ಥೆಯಿಂದ ಮಹಮೂದ್ ಗಾವಾನ್ ಮದರಸಾ ನವೀಕರಣ ಆರಂಭ
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ ಸಾಲೆನ್, ಮುಝಾಹಿದ್ ಪಾಶಾ ಖುರೇಷಿ, ರಾಜ್ಯ ಖಜಾಂಚಿ, ಅಬ್ದುಲ್ ಸಲಾಮ್, ರಾಜ್ಯ ಕಾರ್ಯದರ್ಶಿ ಎಮ್.ಎಮ್ ಬಿಳೆಕುದ್ರಿ, ಜಿಲ್ಲಾಧ್ಯಕ್ಷ ಮುಬಶಿರ್ ಶಿಂಧೆ ಹಾಗೂ ಇತರರು ಇದ್ದರು.





