ಕಮಲನಗರ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಭೀಮಸೇನರಾವ ಶಿಂಧೆ ಹೇಳಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಕಾಂಗ್ರೆಸ್ ಸರಕಾರ ಮಾಡಿರುವ ಕೆಲಸಗಳು ನಾನೇ ಮಾಡುತ್ತಿದ್ದೇನೆ ಎಂದು ಶಾಸಕ ಪ್ರಭು ಚವ್ಹಾಣ ಅವರು ಹೇಳಿಕೊಳ್ಳುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರ ಕ್ಷೇತ್ರದಲ್ಲಿ ಮಾಡದ ಕೆಲಸಗಳು ನಮ್ಮ ಕಾಂಗ್ರೆಸ್ ಸರಕಾರ ಮಾಡುತ್ತಿದೆʼ ಎಂದರು.
ʼಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅವರಿಂದ ಹೊರತು ಶಾಸಕ ಪ್ರಭು ಚವ್ಹಾಣ ಅವರಿಂದ ಅಲ್ಲ. ಜಿಲ್ಲೆಯವರೇ ಆದ ಪೌರಾಡಳಿತ ಸಚಿವ ರಹೀಂಖಾನ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸತತ ಪ್ರಯತ್ನದಿಂದ ಆಗಿದೆ. ನಾನೂ ಸಿಎಂ ಸಿದ್ದರಾಮಯ್ಯಯವರಿಗೆ ಮನವಿ ಮಾಡಿದ್ದೆʼ ಎಂದರು.
ʼಕಮಲನಗರ ಪಟ್ಟಣ ಪಂಚಾಯಿತಿ ಆಗುತ್ತಿರುವ ವಿಷಯ ತಿಳಿದ ಶಾಸಕ ಪ್ರಭು ಚವ್ಹಾಣ ಪಟ್ಟಣ ಪಂಚಾಯಿತಿ ಶ್ರೇಯಸ್ಸು ಪಡೆಯಲು, ಮಾಧ್ಯಮದಲ್ಲಿ ಪ್ರಚಾರ ಪಡೆಯವುದು ಸರಿಯಲ್ಲ. ಜನ ಬುದ್ಧಿವಂತರಾಗಿದ್ದಾರೆ. ಬಿಜೆಪಿ ಸರಕಾರದಲ್ಲಿ ಎರಡು ಬಾರಿ ಪ್ರಭು ಚವ್ಹಾಣ ಸಚಿವರಾದ ಅವಧಿಯಲ್ಲಿ ಔರಾದ್ ಪಟ್ಟಣ ಪಂಚಾಯಿತಿಯನ್ನು ಪುರಸಭೆ, ಕಮಲನಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಮಾಡಲು ಏಕೆ ಆಗಿಲ್ಲʼ ಎಂದು ಶಿಂಧೆ ಪ್ರಶ್ನಿಸಿದರು.
ಇದನ್ನೂ ಓದಿ : ಬೀದರ್ ವಿಶ್ವವಿದ್ಯಾಲಯದಲ್ಲಿ ‘ಕೀರ್ತನೆಗಳ ಸಂಗ್ರಹ’ ಕೃತಿ ಬಿಡುಗಡೆ
ʼಔರಾದ್ ಕ್ಷೇತ್ರದ ಜನರ ಸಮಸ್ಯೆಗಳು ಅಗತ್ಯ ಅಭಿವೃದ್ಧಿಯ ಬಗ್ಗೆ ನಾನಾ ಯೋಜನೆಗಳು ರೂಪಿಸಿಕೊಂಡು ಸರಕಾರಕ್ಕೆ ಮನವಿ ಮಾಡುವ ಮೂಲಕ ಕೆಲಸಗಳು ಮಾಡುತ್ತಿದ್ದೇನೆ. ಕೆಲಸ ಮಾಡಿರುವುದು ಕಾಂಗ್ರೆಸ್ ಸರಕಾರ ಮತ್ತು ಪೌರಾಡಳಿತ ಸಚಿವರು ಅವರ ಕೆಲಸಕ್ಕೆ ಪ್ರಭು ಚವ್ಹಾಣ ಕೃತಜ್ಞತೆ ಸಲ್ಲಿಸಬೇಕು ಹೊರತು ನಾನೇ ಮಾಡಿದ್ದೇನೆ ಎನ್ನುವುದು ಸರಿಯಾದ ಕ್ರಮವಲ್ಲʼ ಎಂದು ತಿಳಿಸಿದ್ದಾರೆ.





