ಸರಕಾರಿ ಕಚೇರಿಗಳು ಜನಸಾಮಾನ್ಯರ ಸೇವೆಗಾಗಿ ನಿಗದಿತ ಸಮಯಕ್ಕೆ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದ್ದರೂ, ಕನಕಪುರದ ರೇಷ್ಮೆ ಇಲಾಖೆಯ ಕಚೇರಿಯಲ್ಲಿ ಮಾತ್ರ ಉಲ್ಟಾ ಪುಲ್ಟಾ ವ್ಯವಸ್ಥೆ ಜಾರಿಯಲ್ಲಿದೆ. ಬೆಳಗ್ಗೆ 10:20 ಆದರೂ ಕಚೇರಿಯ ಬಾಗಿಲು ತೆರೆಯದೆ ಸಿಬ್ಬಂದಿಗಳು ಗೈರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕನಕಪುರ ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಸೈನಿಕ ಹೆಚ್ ಎಸ್ ಸ್ವಾಮಿ ಇಂದು ಬೆಳಗ್ಗೆ ಕಚೇರಿಗೆ ದಿಢೀರ್ ಭೇಟಿ ನೀಡಿದರು. ಸರಕಾರಿ ಆದೇಶದ ಪ್ರಕಾರ ಕಚೇರಿಗಳು ಬೆಳಗ್ಗೆ 10:15 ರಿಂದ 10:20ರೊಳಗೆ ಕಾರ್ಯಾರಂಭ ಮಾಡಬೇಕು. ಆದರೆ, ಸ್ವಾಮಿ 10:20ಕ್ಕೆ ಕಚೇರಿ ಮುಂದೆ ಇದ್ದಾಗಲೂ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿತ್ತು.
ಕಚೇರಿಯಲ್ಲಿ ಕೇವಲ ಒಬ್ಬರೇ ಅಧಿಕಾರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದ್ದು, ಅವರು ಕೂಡ ನಿಗದಿತ ಸಮಯಕ್ಕೆ ಹಾಜರಿರಲಿಲ್ಲ. ರೇಷ್ಮೆ ಇಲಾಖೆಯ ಈ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ನೋಡಲು ‘ಭೂತ ಬಂಗಲೆ’ಯಂತೆ ಭಾಸವಾಗುತ್ತಿದೆ. ಸುಮಾರು ಮೂರು ವರ್ಷಗಳ ಹಿಂದೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡುವ ಭರವಸೆ ಸಿಕ್ಕಿದ್ದರೂ, ಈವರೆಗೂ ಯಾವುದೇ ಕೆಲಸ ನಡೆದಿಲ್ಲ ಎಂದು ಸ್ವಾಮಿ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಮನಗರ | ಅಂಗಡಿ ಮಾಲೀಕನ ಬಳಿ 1.6 ಲಕ್ಷ ರೂ. ಸುಲಿಗೆ ಆರೋಪ: ಪಿಎಸ್‌ಐ ಅಮಾನತು
ದೂರದ ಊರುಗಳಿಂದ ಬರುವ ರೈತರು ಮತ್ತು ಫಲಾನುಭವಿಗಳು ಅಧಿಕಾರಿಗಳಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. “ಇದು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕ್ಷೇತ್ರವಾಗಿದೆ. ಇಂತಹ ಪ್ರತಿಷ್ಠಿತ ಕ್ಷೇತ್ರದಲ್ಲಿಯೇ ಸರಕಾರಿ ಕಚೇರಿಗಳ ಸ್ಥಿತಿ ಹೀಗಿದ್ದರೆ ರೈತರ ಗತಿಯೇನು?” ಎಂದು ಪ್ರಶ್ನಿಸಿರುವ ಸ್ವಾಮಿ, ಕೂಡಲೇ ಈ ಕಚೇರಿಗೆ ಅಗತ್ಯ ಸಿಬ್ಬಂದಿಗಳನ್ನು ನೇಮಿಸಿ, ಕಚೇರಿ ಸರಿಯಾದ ಸಮಯಕ್ಕೆ ತೆರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಚೇರಿಗಳು ಕೇವಲ ದಾಖಲೆಗಳಲ್ಲಿ ಮಾತ್ರವಲ್ಲದೆ, ವಾಸ್ತವದಲ್ಲೂ ಜನರಿಗಾಗಿ ಕೆಲಸ ಮಾಡಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.





