ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವಹೇಳನಕಾರಿಯಾಗಿ ಮಾತನಾಡಿದ್ದು, ರಾಷ್ಟ್ರವ್ಯಾಪಿ ಸುದ್ಧಿಯಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶಿಸದಂತೆ ಸ್ವಾಮೀಜಿ ಮೇಲೆ ನಿರ್ದಂಧ ಹೇರಲಾಗಿದೆ. ಅದರಂತೆ ಇದೀಗ ಧಾರವಾಡ ಜಿಲ್ಲೆಗೂ ಸ್ವಾಮೀಜಿ ಬರದಂತೆ ಪ್ರತಿಬಂಧಕಾಜ್ಞೆ ಆದೇಶ ಹೊರಡಿಸಿಸಲು ಒತ್ತಾಯಿಸಿ ಜಿಲ್ಲೆಯ ಬಸವಪರ ಸಂಘಟನೆಗಳು ಮತ್ತು ಲಿಂಗಾಯತರು ಜಿಲ್ಲಾಧಿಕಾರಿ ಹಾಗೂ ಅಣ್ಣಿಗೇರಿ ತಾಲೂಕು ತಹಶೀಲ್ದಾರರಿಗೂ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನವೆಂಬರ್ 5ರಿಂದ 7ರವರೆಗೆ ಸಹಜಾನಂದ ಸಪ್ತಾಹ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ನವೆಂಬರ್ 7ರಂದು ನಡೆಯುವ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಕನ್ನೇರಿ ಮಠದ ಸ್ವಾಮೀಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಬಸವಪರ ಸಂಘಟನೆಗಳು ಮತ್ತಷ್ಟು ಕೆಂಡಾಮಂಡಲವಾಗಿವೆ. ಈಗಾಗಲೇ ಕಳೆದ ಅಕ್ಟೋಬರ್ 30ರಂದು ಬಸವಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಬೆನ್ನಲ್ಲೇ ನವೆಂಬರ್ 1ರಂದು ಅಣ್ಣಿಗೇರಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಲಿಂಗಾಯತ ಸ್ವಾಮೀಜಿಗಳು, ʼಕನ್ನೇರಿ ಸ್ವಾಮೀಜಿ ಅಣ್ಣಿಗೇರಿ ತಾಲೂಕಿಗೆ ಬರುವುದನ್ನೂ ತಡೆಹಿಡಿಯಬೇಕುʼ ಎಂದು ಅಗ್ರಹಿಸಿದ್ದಾರೆ.
ತಾಲೂಕಿನ ಹಳ್ಳಿಕೇರಿ ಗ್ರಾಮಕ್ಕೆ ಕಳೆದ 8 ವರ್ಷಗಳ ಹಿಂದೆ ಪ್ರಮೋದ್ ಮುತಾಲಿಕ್ ಅವರು ಬಂದುಹೋದ ನಂತರ ಮೂವರು ಕೊಲೆಯಾಗಿದ್ದಾರೆ. ಅಂದಿನಿಂದ ಈ ಗ್ರಾಮವನ್ನು ಸೂಕ್ಷ್ಮ ಪ್ರದೇಶದ ಪಟ್ಟಿಗೆ ಸೇರಿಸಲಾಗಿದೆ. ಆದ್ದರಿಂದ ಅಶ್ಲೀಲ, ಅವಹೇಳನಕಾರಿ ಹಾಗೂ ಸಂವಿಧಾನಬಾಹಿರ ಹೇಳಿಕೆ ನೀಡಿರುವ ಕನ್ನೇರಿ ಸ್ವಾಮೀಜಿ ವಿರುದ್ಧ ಲಿಂಗಾಯತರು ಆಕ್ರೋಶಗೊಂಡಿದ್ದಾರೆ. ಸ್ವಾಮೀಜಿ ಬಂದರೆ ಅಶಾಂತಿ ಉಂಟಾಗಬಹುದು ಎಂಬ ಕಾರಣಕ್ಕೆ ಅವರು ಬರುವುದಕ್ಕೆ ನಿರ್ಬಂಧ ಏರಲು ಒತ್ತಾಯಿಸುತ್ತಿದ್ದಾರೆ.

ಮಹಾರಾಷ್ಟ್ರದ ಕಾರ್ಯಕ್ರಮವೊಂದರಲ್ಲಿ ಕನೇರಿ ಸ್ವಾಮೀಜಿ, ಕೆಲವು ಲಿಂಗಾಯತ ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ ನಡೆಸಿ, “ಮುಖ್ಯಮಂತ್ರಿಗಳ ಕೃಪಾಪೋಷಿತ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಕಲಾವಿದರು ಸೇರಿ ‘ಬಸವ ಸಂಸ್ಕೃತಿ ಅಭಿಯಾನ’ ಎನ್ನುವ ನಾಟಕವನ್ನು ರಾಜ್ಯಾದ್ಯಂತ ಮಾಡುತ್ತಿದ್ದಾರೆ. ಗುಡಿಯಲ್ಲಿ ದೇವರಿಲ್ಲ. ಮನೆಯಲ್ಲಿನ ದೇವರನ್ನು ಹೊಳೆಗೆ ಹಾಕಿ ಎನ್ನುತ್ತಿದ್ದಾರೆ. ಅವರನ್ನು ಚ.. ಹೊಡೆಯಬೇಕು. ಸೂ.. ಮಕ್ಕಳುʼ ಎಂದೆಲ್ಲ ಅವಾಚ್ಯ ಮತ್ತು ಅಸಂವಿಧಾನಿಕ ಪದಗಳನ್ನು ಬಳಸಿದ್ದರು. ಇದರಿಂದ ಸಿಟ್ಟಾದ ಬಸವಪರ ಸಂಘಟನೆಗಳು ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇತ್ತ ಬಸವಪರ ಸಂಘಟನೆಗಳು ಸ್ವಾಮೀಜಿ ವಿರುದ್ಧ ಕಿಡಿಕಾರಿದರೆ, ಅತ್ತ ಗ್ರಾಮಸ್ಥರು “ಈ ಕಾರ್ಯಕ್ರಮವು ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕನ್ನೇರಿ ಶ್ರೀಗಳನ್ನು ನಿರಂತರ 14 ವರ್ಷಗಳಿಂದ ಕರೆಯಿಸುತ್ತಿದ್ದೇವೆ. ಅವರು ಬಾಯಿತಪ್ಪಿ, ಆಡು ಭಾಷೆಯಲ್ಲಿ ಮಾತನಾಡಿರುವುದನ್ನು ನೆಪಮಾಡಿಕೊಂಡು ಶ್ರೀಗಳನ್ನು ಜಿಲ್ಲೆಗೆ ಬರದಂತೆ ನಿರ್ಬಂಧ ಹೇರಬೇಕೆಂದು ಒತ್ತಾಯಿಸುವುದು ಸರಿಯಲ್ಲ. ಶ್ರೀಗಳು ಸಾವಯವ ಕೃಷಿಯ ಬಗ್ಗೆ ಬಹಳಷ್ಟು ಜ್ಞಾನವುಳ್ಳವರಾದ ಕಾರಣ ನಮ್ಮ ರೈತರಿಗೆ ಅವರ ಮಾರ್ಗದರ್ಶನ ಉಪಯೋಗವಾಗುತ್ತದೆ. ಅವರನ್ನು ಕರೆಯಿಸಲು ಬಹಳ ಶ್ರಮಪಟ್ಟಿದ್ದೇವೆ. ಇದರಲ್ಲಿ ರಾಜಕೀಯ ನಡೆಯುತ್ತಿದೆ” ಎಂದು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಅಣ್ಣಿಗೇರಿ ಪಟ್ಟಣದ ಪ್ರೊ. ಎಸ್ ಎಸ್ ಹರ್ಲಾಪುರ ಅವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ಹಳ್ಳಿಕೇರಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಅವಹೇಳನ ಪದಬಳಕೆ ಮಾಡಿದ ಕನ್ನೇರಿ ಸ್ವಾಮೀಜಿ ಬರುವುದನ್ನು ಮಾತ್ರ ವಿರೋಧಿಸುತ್ತೇವೆ. ಈ ಹಿಂದೆ ಪ್ರಮೋದ ಮುತಾಲಿಕ್ ಬಂದಿದ್ದ ಸಂದರ್ಭದಲ್ಲಿ 3 ಕೊಲೆ ಸಂಭವಿಸಿದ್ದವು. ಅಲ್ಲಿಂದ ಈ ಗ್ರಾಮವನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. ಇದೀಗ ಶ್ರೀಗಳ ಮಾತಿನಿದಿಂದ ಲಿಂಗವಂತರ ಮನಸ್ಸಿಗೆ ನೋವಾಗಿದ್ದು, ಅದರಿಂದ ಅಹಿತಕರ ಘಟನೆ ನಡೆಯಲು ಅವಕಾಶ ಕೊಡಬಾರದೆಂಬ ಕಾರಣಕ್ಕೆ ಅವರನ್ನು ತಡೆಯಬೇಕು. ಒಂದು ವೇಳೆ ಅಶಾಂತಿ, ಗಲಬೆಗಳಾದರೆ; ಅಲ್ಲಿ ನಡೆಯುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ” ಎಂದರು.
ಹಿರಿಯ ಪತ್ರಕರ್ತ ವೀರೇಶ ಶಾನುಬೋಗರ ಮಾತನಾಡಿ, “ಹಳ್ಳಿಕೇರಿ ಗ್ರಾಮವು ಸೂಕ್ಷ್ಮ ಪ್ರದೇಶವಾಗಿ ಗುರುತಿಸಲ್ಪಟ್ಟಿದ್ದು, ಅಶ್ಲೀಲ ಪದಬಳಕೆ ಮಾಡಿದ ಕನ್ನೇರಿ ಸ್ವಾಮೀಜಿ ಬಂದರೆ ಅಶಾಂತಿ ಉಂಟಾಗಬಹುದು. ಇನ್ನು ಲಿಂಗಾಯತರ ವಿರುದ್ಧ ಲಿಂಗಾಯತ ಸ್ವಾಮೀಜಿ ಹಾಗೂ ಲಿಂಗಾಯತ ನಾಯಕರನ್ನು ಎತ್ತಿಕಟ್ಟುವ ಸಂಚು ನಡೆಯುತ್ತಿದೆ. ಸ್ವಾಮಿಗಳಾದವರು ಸಮಾಜಕ್ಕೆ ಮಾದರಿಯಾಗಿ, ದಾರಿತೋರುವ ಕೆಲಸ ಮಾಡಬೇಕೇ ಹೊರತು ಅವರೇ ಹೀಗೆಲ್ಲ ಮಾತನಾಡಿದರೆ ಹೇಗೆ? ಈಗಾಗಲೇ ಈ ಕುರಿತು ಘನ ನ್ಯಾಯಾಲಯವೇ ಅವರಿಗೆ ಛೀಮಾರಿ ಹಾಕಿದೆ. ಒಕ್ಕಲುತನದ ಅಪಾರ ಜ್ಞಾನವಿರುವ ಅವರ ಬಗ್ಗೆ ನಮಗೆಲ್ಲ ಅಪಾರವಾದ ಗೌರವವಿತ್ತು. ಅವರು ಲಿಂಗಾಯತ ವಿರಕ್ತ ಮಠದ ಪೀಠಾಧಿಪತಿಯಾಗಿದ್ದು, ಯಾವುದೋ ಸನಾತನ, ಹಿಂದೂ ಅಥವಾ ಬಿಜೆಪಿಯ ವಿಚಾರಗಳನ್ನು ಇಲ್ಲಿ ಹೇರಲು ಪ್ರಯತ್ನಿಸಿ, ಅನ್ನಹಾಕಿದ ತಾಯಿಗೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿರುವ ಕೆಲವು ನಾಯಕರು ಅವರ ಹೇಳಿಕೆ ಸರಿ ಎಂಬಂತೆ ಬೆಂಬಲಿಸಿ ಮಾತನಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಳ್ಳಿಕೇರಿಯ ಕಾರ್ಯಕ್ರಮದ ಆಯೋಜಕ ಸಿದ್ದಲಿಂಗಪ್ಪ ಗೋಕುಲ ಮಾತನಾಡಿ, “ಕನ್ನೇರಿ ಶ್ರೀಗಳು ಕಳೆದ 14 ವರ್ಷಗಳಿಂದ ನಮ್ಮೂರಿಗೆ ಬರುತ್ತಿದ್ದಾರೆ. ಯಾವತ್ತಿಗೂ ಈ ರೀತಿಯ ವಿರೋಧಾಬಾಸಗಳು ಕೇಳಿಬಂದಿಲ್ಲ. ಈ ಬಾರಿ ಅವರು ಬೇರೆ ರೀತಿಯಲ್ಲಿ ಮಾತನಾಡಿದ್ದಕ್ಕೆ ವಿರೋಧಗಳು ಕೇಳಿಬರುತ್ತಿವೆ. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು ಮಾತ್ರ ಇರುತ್ತಾರೆ. ಯಾವುದೇ ರಾಜಕೀಯ ನಾಯಕರನ್ನು ವೇದಿಕೆ ಮೇಲೆ ಹತ್ತಿಸುವುದಿಲ್ಲ. ಯಾವುದೇ ಜಾತಿ ಭೇದಗಳಿಲ್ಲದೆ ಶಾಂತಿ, ಸೌಹಾರ್ದತೆಯಿಂದ ಕಾರ್ಯಕ್ರಮವನ್ನು ನಡೆಸುತ್ತ ಬಂದಿದ್ದೇವೆ. ಸ್ವಾಮೀಜಿಗಳು ಆಡು ಭಾಷೆಯಲ್ಲಿ ಮಾತನಾಡಿದ್ದನ್ನೇ ನೆಪಮಾಡಿಕೊಂಡು ಕಾರ್ಯಕ್ರಮಕ್ಕೆ ಬರದಂತೆ ಅವರನ್ನು ತಡೆಯುತ್ತಿದ್ದಾರೆ. ಸ್ವಾಮೀಜಿಗಳು ಸಾವಯವ ಕೃಷಿಯ ಬಗ್ಗೆ ಚೆನ್ನಾಗಿ ಹೇಳುತ್ತಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಕರೆಯಿಸುತ್ತಿದ್ದೇವೆ” ಎಂದರು.
ಸ್ಥಳೀಯ ನಿವಾಸಿ ಈರಣ್ಣ ಚಂದರಗಿ ಮಾತನಾಡಿ, “ಕನ್ನೇರಿ ಶ್ರೀಗಳನ್ನು ಕರೆಯಿಸಲು ನಾವು ಒಂದು ವರ್ಷದ ಹಿಂದೆಯೇ ಆಮಂತ್ರಿಸಿದ್ದೇವೆ. ನಮ್ಮ ಗುರುಗಳು ಬಾರದಿದ್ದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ. ಆದ್ದರಿಂದ ಅವರು ಬರಲೇಬೇಕೆಂಬ ಒತ್ತಾಯ ನಮ್ಮದಾಗಿದ್ದು, ಅವರೂ ಬರುವುದಾಗಿ ಭರವಸೆ ನೀಡಿದ್ದಾರೆ” ಎಂದರು.
ಅಣ್ಣಿಗೇರಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಚಂಬಣ್ಣ ಹಾಳತೋಟರ ಮಾತನಾಡಿ, “ಹಳ್ಳಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಾಯ, ಸಹಕಾರವಿದೆ. ಆದರೆ ಕನ್ನೇರಿ ಸ್ವಾಮೀಜಿ ಬರುವುದನ್ನು ಮಾತ್ರ ವಿರೋಧಿಸುತ್ತಿದ್ದೇವೆ” ಎಂದರು.
ಧಾರವಾಡದ ಬಸವಂತಪ್ಪ ತೋಟದ ಮಾತನಾಡಿ, “ಕನ್ನೇರಿ ಸ್ವಾಮೀಜಿ ಜಿಲ್ಲೆಗೆ ಬರುವುದನ್ನು ತಡೆಹಿಡಿದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಧಾರವಾಡದ ವಕೀಲ ಕೆ ಎಸ್ ಕೊರಿಶೆಟ್ಟರ್ ಮಾತನಾಡಿ, “ಕನ್ನೇರಿ ಶ್ರೀಗಳು ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಹೋದರೆ ಈ ಪ್ರಕ್ಷುಬ್ಧ ಪರಿಸ್ಥಿತಿ ಹೀಗೆಯೇ ಮುಂದುವರೆಯುತ್ತದೆ. ಸಾಮಾನ್ಯ ಮನುಷ್ಯನೂ ಕೂಡ ಮಾತನಾಡಬಾರದಂತಹ ಮಾತನ್ನು ಸ್ವಾಮಿಗಳು ಮಾತನಾಡಿದ್ದಾರೆ. ಆದರೂ ಕೂಡ ಸಮರ್ಥಿಸಿಕೊಂಡು ನಡೆಯುತ್ತಿದ್ದಾರೆ. ಲಿಂಗಾಯತ ಧರ್ಮದ ಒಕ್ಕೂಟ ಹಾಗೂ ಬಸವ ಸಂಸ್ಕೃತಿ ಅಭಿಯಾನದ ವಿರುದ್ಧ ಅವರು ಮಾತನಾಡುವಾಗ ಬಹುಶಃ ಇದರ ಹಿಂದೆ ಯಾರೋ ಇದ್ದಾರೆ ಎಂದೆನಿಸುತ್ತಿದೆ. ಲಿಂಗಾಯತ ಸಮಾಜವನ್ನು ಲಿಂಗಾಯತ ಸ್ವಾಮಿಗಳಿಂದಲೇ ಹದಗೆಡಿಸುವ ಸಂಚು ನಡೆಯುತ್ತಿದೆ. ಮನುವಾದಿಗಳು ಸಮಾಜವಾದಿ ಸಿದ್ಧಾಂತದ ಅಂಬೇಡ್ಕರ್ ಮತ್ತು ಬಸವಣ್ಣನ ಚಿಂತನೆಗಳನ್ನು ನಮ್ಮವರಿಂದಲೇ ವಿರೋಧಿಸುವ ತಂತ್ರ ಮಾಡುತ್ತಿದ್ದಾರೆ. ಕನ್ನೇರಿ ಸ್ವಾಮಿಗಳು ಧಾರವಾಡ ಜಿಲ್ಲೆಗೆ ಬಂದರೆ ಬಸವಭಕ್ತರ ಮನಸ್ಸಿಗೆ ನೋವಾಗುತ್ತದೆ” ಎಂದರು.
ಜೆಎಲ್‌ಎಂ ಯುವ ಘಟಕದ ಸಿ ಜಿ ಪಾಟೀಲ ಮಾತನಾಡಿ, “ಬಸವತತ್ವದ ಮೇಲಿರುವ ಹಗೆತನದಿಂದ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದಾರೆ. ಮನುವಾದಿ ಮನಸ್ಥಿತಿ ಇರುವ ಸ್ವಾಮಿಗಳನ್ನು ಹಾಗೂ ಅವರ ಹೇಳಿಕೆಗಳನ್ನು ಬೆಂಬಲಿಸುವ ರಾಜಕೀಯ ನಾಯಕರನ್ನು ಲಿಂಗಾಯತ ಸಮಾಜವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ತಕ್ಕಪಾಠ ಕಲಿಸುತ್ತೇವೆ. ಅವಾಚ್ಯ ಶಬ್ಧ ಬಳಸಿದ ಕನ್ನೇರಿ ಶ್ರೀಗಳು ಧಾರವಾಡ ಜಿಲ್ಲೆಗೆ ಬಂದರೆ ತೀವ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಇದನ್ನೂ ಓದಿದ್ದೀರಾ? ಅಣ್ಣಿಗೇರಿ | ಸಹಜಾನಂದ ಸಪ್ತಾಹ ಕಾರ್ಯಕ್ರಮಕ್ಕೆ ಕನ್ನೇರಿ ಮಠದ ಸ್ವಾಮಿ ಬರುವುದನ್ನು ತಡೆಯುವಂತೆ ಒತ್ತಾಯ
ಇನ್ನು ಹಳ್ಳಿಕೇರಿ ಗ್ರಾಮಸ್ಥರು ಕನ್ನೇರಿ ಶ್ರೀಗಳ ಮೇಲೆ ಅಪಾರವಾದ ಗೌರವ ಬೆಳೆಸಿಕೊಂಡಿದ್ದು, ಅವರ ಈ ಹೇಳಿಕೆಯಿಂದ ಅಡ್ಡ ಕತ್ತರಿಯಲ್ಲಿ ಸಿಕ್ಕಂತಾಗಿದ್ದಾರೆ. ಧಾರ್ಮಿಕವಾಗಿ ಮನಸೋತಿರುವಾಗ ಅತ್ತ ಶ್ರೀಗಳಿಗೂ ನೇರವಾಗಿ ತಾವು ಬರಬೇಡಿ ಎಂದು ಹೇಳಲೂ ಆಗದೆ, ಇತ್ತ ಕಾನೂನು ವ್ಯವಸ್ಥೆಗೂ ಗೌರವ ನೀಡುತ್ತ, ಏನು ಮಾಡಬೇಕೆಂಬ ಗೊಂದಲದಲ್ಲಿದ್ದಾರೆ. ಒಟ್ಟಾರೆಯಾಗಿ ಕನ್ನೇರಿ ಶ್ರೀಗಳ ಹೇಳಿಕೆಯಿಂದ ಭಕ್ತರ ಮನಸ್ಸುಗಳು ಅಲ್ಲೋಲಕಲ್ಲೋಲ ಆಗಿರುವುದಂತೂ ಗ್ರಾಮದಲ್ಲಿ ಎದ್ದುಕಾಣುತ್ತಿದೆ.
ಈಗಾಗಲೇ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಗೆ ಗ್ರಾಮಸ್ಥರನ್ನು ಕರೆಯಿಸಿ ಹಳ್ಳಿಕೇರಿ ಗ್ರಾಮ ಈಗಾಗಲೇ ಸೂಕ್ಷ್ಮ ಪ್ರದೇಶಕ್ಕೆ ಒಳಪಟ್ಟಿದ್ದರಿಂದ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ. ಧಾರವಾಡ ಜಿಲ್ಲಾಧಿಕಾರಿ ಕನೇರಿ ಶ್ರೀಗಳಿಗೆ ಪ್ರತಿಬಂಧಕಾಜ್ಞೆ ಜಾರಿ ಮಾಡುವ ಲಕ್ಷಣಗಳು ಅಲ್ಲಲ್ಲಿ ಕೇಳಿಬರುತ್ತಿವೆ.





